ಶ್ರೀನಿವಾಸಪುರ (ಕೋಲಾರ): ‘ಎರಡು ವರ್ಷಗಳಿಂದ ಶಾಸಕರಿಗೆ ಸಿಗಬೇಕಾದ ಅನುದಾನಗಳನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಹೀಗಾಗಿ, ಹೋದಲ್ಲಿ ಬಂದಲ್ಲಿ ಜನರು ಎಲ್ಲಾ ಶಾಸಕರನ್ನು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದ ಪುಂಗನೂರು ಕ್ರಾಸ್‌ನಲ್ಲಿ ಶುಕ್ರವಾರ ನಡೆದ ಜನರೊಂದಿಗೆ ಜನತಾದಳ, ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ಪಕ್ಷದ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಅನುದಾನ ಕೊಡುವುದಾಗಿ ಉಪಮುಖ್ಯಮಂತ್ರಿ ಅಮಿಷವೊಡ್ಡುತ್ತಿದ್ದಾರೆ. ಕುಮಾರಣ್ಣನ ಆರೋಗ್ಯದ ಬಗ್ಗೆ ಲೇವಡಿ ಮಾಡುವುದು, ನಿಖಿಲ್ ಕುಮಾರಸ್ವಾಮಿ ರಾಜ್ಯ ಅಧ್ಯಕ್ಷರಾಗುತ್ತಾರಂತೆ ಎಂದು ಕೇವಲವಾಗಿ ಮಾತನಾಡುತ್ತಿದ್ದಾರೆ. ಫೋಟೊ ತೆಗೆದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ಶಾಸಕರಿಗೆ ಅನುದಾನ ಮಾತ್ರ ಸಿಕ್ಕಿಲ್ಲ’ ಎಂದು ಹರಿಹಾಯ್ದರು.
‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರಸ್ತೆ ಮೂಲಕ ಬಂದಾಗ ರಸ್ತೆ ಬದಿಗಳಲ್ಲಿ ಮಾವಿನ ಹಣ್ಣು ಚೆಲ್ಲಿರುವುದನ್ನು ನೀಡಿ ಮನಸ್ಸಿಗೆ ತುಂಬಾ ನೋವಾಯಿತು. ಕುಮಾರಸ್ವಾಮಿ ಮನವಿಗೆ ಸ್ಪಂದಿಸಿ ಕೇಂದ್ರ ಕೃಷಿ ಸಚಿವರು ಪರಿಹಾರ ಘೋಷಿಸಿದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ಅಲ್ಲಿವರೆಗೆ ರಾಜ್ಯ ಸರ್ಕಾರ ಮಾವು ಬೆಳೆಗಾರರ ಸಂಕಷ್ಟಕ್ಕೆ ಧಾವಿಸದೆ ನಿರ್ಲಕ್ಷ ತೋರಿತ್ತು’ ಎಂದು ಆರೋಪಿಸಿದರು.
‘ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನರನ್ನು ಮರುಳು ಮಾಡಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಜನ ಯಾವಾಗಲೂ ತಮ್ಮ ಆಟಗಳಿಗೆ ಮರುಳಾಗುವುದಿಲ್ಲ. ಜನ ಎಚ್ಚೆತ್ತುಕೊಂಡಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
ಶಾಸಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಆದರೆ, ಇಷ್ಟೊಂದು ದರಿದ್ರ ಸರ್ಕಾರವನ್ನು ಕಂಡಿಲ್ಲ. ಶಾಸಕರಿಗೆ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಸರ್ಕಾರ ಇದೇ ರೀತಿ ಮುಂದುವರಿದರೆ ಜನ ತಿರುಗಿ ಬೀಳುತ್ತಾರೆ’ ಎಂದರು.
ಇದಕ್ಕೂ ಮೊದಲು ಮಾವಿನ ನಗರಿ ಶ್ರೀನಿವಾಸಪುರಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾಕಿದರು.
ಸಂಸದ ಎಂ.ಮಲ್ಲೇಶ್ ಬಾಬು, ಮುಖಂಡ ಸಿಎಂಆರ್ ಶ್ರೀನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಇದ್ದರು.
Highlights - ಉಪಮುಖ್ಯಮಂತ್ರಿ ವಿರುದ್ಧ ನಿಖಿಲ್ ವಾಗ್ದಾಳಿ ಸದಸ್ಯತ್ವ ನೋಂದಣಿ ಅಭಿಯಾನ ಮಾವು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದು ಕುಮಾರಸ್ವಾಮಿ–ನಿಖಿಲ್
Quote - ನನಗೆ ಮೋಸ ಮಾಡುವ ಅಭ್ಯಾಸ ಇಲ್ಲ. ಮೋಸ ಮಾಡಿದರೆ ರಾತ್ರಿ ನಿದ್ದೆ ಬರಲ್ಲ. ನನಗೆ ಈಗ 77 ವರ್ಷ. ನಾನು ಯಾವತ್ತೂ ನಿವೃತ್ತಿ ಆಗುವುದಿಲ್ಲ. ಸತ್ತ ಮೇಲಷ್ಟೇ ನಿವೃತ್ತಿ ಆಗುತ್ತೇನೆ ಜಿ.ಕೆ.ವೆಂಕಟಶಿವಾರೆಡ್ಡಿ ಶಾಸಕ
Cut-off box - ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವಿರುದ್ಧ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು. ‘ವೈದ್ಯಕೀಯ ಕಾಲೇಜು ಕ್ಯಾನ್ಸರ್ ಆಸ್ಪತ್ರೆ ತಂದು ಶ್ರೀನಿವಾಸಪುರ ತಾಲ್ಲೂಕನ್ನು ಸಿಂಗಪುರ ಮಾಡುವುದಾಗಿ ಭಾಷಣ ಮಾಡಿದ್ದ ಮಾಜಿ ಶಾಸಕ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು ಆರೋಗ್ಯ ಸಚಿವರಾಗಿದ್ದರು. ಆದರೂ ಏನೂ ಮಾಡಲಿಲ್ಲ. ಮೋಸ ಮಾಡಿ ಶಾಸಕ ಮಂತ್ರಿ ಆದರು’ ಎಂದು ದೂರಿದರು. ‘ಈಗ ನಾನು ತಾಲ್ಲೂಕಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಗಾಗಿ 26 ರಸ್ತೆ ಹಾಗೂ ಕೈಗಾರಿಕಾ ಪ್ರದೇಶ ಮಾಡುತ್ತಿದ್ದರೆ ತಾಲ್ಲೂಕಿನ ಮಾಜಿ ಶಾಸಕರ ಅಣತಿಯಂತೆ ನಸೀರ್ ಅಹಮದ್ ತಡೆಯುತ್ತಿದ್ದಾರೆ. ವರ್ಗಾವಣೆಯಲ್ಲೂ ತಲೆ ಹಾಕುತ್ತಿದ್ದು ನಾಚಿಕೆ ಆಗುವುದಿಲ್ಲವೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
Cut-off box - ಮೇಕೆದಾಟು ಯೋಜನೆಗೆ ಬೆಂಬಲ ಮೇಕೆದಾಟು ಯೋಜನೆ ಜಾರಿಗೆ ಜೆಡಿಎಸ್ ಪಕ್ಷದ ನಾಯಕರು ಸಂಪೂರ್ಣವಾಗಿ ಬೆಂಬಲಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ನಾಯಕರು ತಮಿಳುನಾಡಿನ ತಮ್ಮ ಮಿತ್ರ ಪಕ್ಷದ ನಾಯಕರೊಂದಿಗೆ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೊಡಿಸಿದರೆ ಕೇಂದ್ರ ಸರ್ಕಾರದಿಂದ ಕುಮಾರಸ್ವಾಮಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.