ADVERTISEMENT

ಮೀನುಪ್ರಿಯರ ಮುಂದುವರಿದ ಬೇಟೆ

ಕೆರೆ ಕೋಡಿಗಳಲ್ಲಿ ಬಲೆ: ಕೆಲವರಿಗೆ ಭಾರಿ ಭೋಜನ; ಹಲವರಿಗೆ ವ್ಯಾಪಾರ; ಸಾಕಣೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 6:11 IST
Last Updated 25 ನವೆಂಬರ್ 2021, 6:11 IST
ಮುಷ್ಟೂರು ಸೇತುವೆಯ ಕೆಳಗೆ ಹರಿಯುತ್ತಿರುವ ಕೋಡಿಯಲ್ಲಿ ಬಲೆಗಳನ್ನು ಹಾಕಿಕೊಂಡು ಮೀನು ಹಿಡಿಯುತ್ತಿರುವ ಮೀನುಗಾರರು
ಮುಷ್ಟೂರು ಸೇತುವೆಯ ಕೆಳಗೆ ಹರಿಯುತ್ತಿರುವ ಕೋಡಿಯಲ್ಲಿ ಬಲೆಗಳನ್ನು ಹಾಕಿಕೊಂಡು ಮೀನು ಹಿಡಿಯುತ್ತಿರುವ ಮೀನುಗಾರರು   

ನಂಗಲಿ: ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು ಮೀನು ಪ್ರಿಯರು ಮೀನಿನ ಬೇಟೆಯಲ್ಲಿ ತೊಡಗಿದ್ದಾರೆ. ಕೆಲವರು ಮೀನುಗಳನ್ನು ಹಿಡಿದು ಮನೆಯಲ್ಲಿ ಆಹಾರಕ್ಕಾಗಿ ಬಳಸಿದರೆ, ಮತ್ತೆ ಕೆಲವರು ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು 436 ಕೆರೆಗಳಿದ್ದು ಇದರಲ್ಲಿ 35 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೆ ಉಳಿದ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿವೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆರೆಗಳುಆಯಾಯ ಗ್ರಾಮ ಪಂಚಾಯಿತಿಯ ಅಧೀನದಲ್ಲಿದ್ದು ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದರಿಂದ ಜನ ಕೋಡಿಗಳಲ್ಲಿ, ಕುಂಟೆಗಳಲ್ಲಿ, ಏಟಿಗಳಲ್ಲಿ, ಚೆಕ್ ಡ್ಯಾಂಗಳ ನೀರಿನಲ್ಲಿ ಮೀನು ಪ್ರಿಯರು ಮೀನು ಬೇಟೆಯಲ್ಲಿ ಮಗ್ನರಾಗಿದ್ದಾರೆ.

ಭೀಕರಬರಗಾಲದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿದ್ದ ತಾಲ್ಲೂಕಿನಲ್ಲಿ ಕೆರೆಗಳು ತುಂಬಿ ಸುಮಾರು 16-17 ವರ್ಷಗಳೇ ಕಳೆದಿತ್ತು. ಈಚೆಗೆ ವರ್ಷದ ಹಿಂದೆ ಬಿದ್ದ ಮಳೆಗೆ ಕೆಲವು ಸಣ್ಣ ಪುಟ್ಟ ಕೆರೆಗಳು ತುಂಬಿ ಕೋಡಿ ಹೋಗಿದ್ದವು. ಕೆಲವು ಕೆರೆಗಳು ಅರ್ಧಂಬರ್ಧ ತುಂಬಿತ್ತು. ಆದ್ದರಿಂದ ಎಲ್ಲಾ ಕೆರೆಗಳಲ್ಲಿಆಯಾಯ ಗ್ರಾಮ ಪಂಚಾಯಿತಿಗಳಲ್ಲಿ ಕೆಲವರು ಹರಾಜನ್ನು ಕೂಗಿ ಕಾಮನ್‌ ಕಾರ್ಫ್, ಗ್ರಾಸ್ ಕಾರ್ಫ್, ಕಾಟ್ಲಾ, ರೊಹೊ ಮುಂತಾದ ಜಾತಿಗಳ ಲಕ್ಷಾಂತರ ಮೀನು ಮರಿಗಳನ್ನು ಬಿಟ್ಟಿದ್ದರು. ಇದರಿಂದ ಮೀನುಗಳು ಎಲ್ಲಾ ಕೆರೆಗಳಲ್ಲಿ ದೊಡ್ಡದಾಗಿವೆ.

ADVERTISEMENT

ಭಾರಿ ಮಳೆಗೆ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಿರುವುದರಿಂದ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಕೋಡಿಗಳ ಮೂಲಕ ನೀರು ಹರಿಯುತ್ತಿರುವುದರಿಂದ ಸಹಜವಾಗಿಯೇ ಮೀನುಗಳೂ ಸಹ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿವೆ. ಮೀನುಗಳನ್ನು ನೋಡಿದ ಜನ ಬಲೆಗಳು, ಕೊಡಗಳು, ಗಾಲಗಳನ್ನು ಹಾಕಿಕೊಂಡು ಹಿಡಿಯುತ್ತಿದ್ದರೆ, ಮತ್ತೆ ಕೆಲವರು ರೇಷ್ಮೆ ಹುಳುವಿನ ಮನೆಗೆ ಹಾಕುವ ವೈರ್ ನೆಟ್ಟನ್ನೇ ಮೀನಿನ ಬಲೆಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.

ಇನ್ನು ತಾಲ್ಲೂಕಿನಲ್ಲಿ ಅತಿದೊಡ್ಡ ಕೆರೆಯಾದ ನಂಗಲಿ ಕೆರೆ ತುಂಬಿ 16 ವರ್ಷಗಳು ಕಳೆದಿತ್ತು.
ವರ್ಷದ ಹಿಂದೆ ಬಿದ್ದ ಮಳೆಗೆ ಕೆರೆಯಲ್ಲಿ ಕಾಲು ಭಾಗ ನೀರು ಸಂಗ್ರಹವಾಗಿದ್ದರಿಂದ ಹರಾಜುದಾರರು 13 ಲಕ್ಷ ಮೀನುಗಳ ಮರಿಗಳನ್ನು ಬಿಟ್ಟಿದ್ದರು. ಆದರೆ 12 ದಿನಗಳ ಹಿಂದೆ ಬಿದ್ದ ಭಾರೀ ಮಳೆಗೆ ಸುಮಾರು 4.5 ಅಡಿ ನೀರು ಕೋಡಿ ಹೋಗಿದ್ದರಿಂದ ಸಾವಿರಾರು ಮೀನುಗಳು ಹೊರಹೋಗುತ್ತಿವೆ. ಹೀಗಾಗಿ, ನಂಗಲಿ ಕೆರೆಯಿಂದ ಬ್ಯಾಟನೂರಿನ ಕೆರೆಯವರೆಗೂ ಏಟಿ ಮತ್ತು ನೀರು ಹರಿಯುವ ಸ್ಥಳಗಳಲ್ಲಿ ಮೀನುಗಳನ್ನು ಹಿಡಿಯಲು ಜನರ ಗುಂಪುಗಳೇ ಕಂಡು ಬರುತ್ತಿದೆ.

ಶೇ 70ರಷ್ಟು ಮೀನು ಹೊರಹೋಗಿವೆ

ನಂಗಲಿ ಕೆರೆಯಲ್ಲಿ ಮೀನುಗಳನ್ನು ಹಿಡಿಯಲು ವರ್ಷಕ್ಕೆ ₹1.4 ಲಕ್ಷ ಸಲ್ಲಿಸಿ ಮೀನುಗಾರಿಕಾ ಇಲಾಖೆಯಿಂದ ಹರಾಜನ್ನು ಕೂಗಿ ಶಿವಮೊಗ್ಗ , ಭದ್ರಾವತಿ ಹಾಗೂಆಂಧ್ರಪ್ರದೇಶದಿಂದ 13 ಲಕ್ಷ ವಿವಿಧ ಬಗೆಯ ಮೀನಿನ ಮರಿಗಳನ್ನು ತಂದು ಕೆರೆಯಲ್ಲಿ ಬಿಡಲಾಗಿತ್ತು. ₹1.6 ಲಕ್ಷ ನವೀಕರಣ ಹಣವನ್ನೂ ಕಟ್ಟಲಾಗಿತ್ತು. 13 ಲಕ್ಷ ಮೀನು ಮರಿ, ಎಲ್ಲಾ ವೆಚ್ಚ ಸೇರಿ ಸುಮಾರು ₹20 ಲಕ್ಷ ಖರ್ಚಾಗಿದೆ. ಆದರೆ 12 ದಿನಗಿಂದ ಶೇ 70ರಷ್ಟು ಮೀನುಗಳು ಕೋಡಿಯಲ್ಲಿ ಕೊಚ್ಚಿಕೊಂಡು ಹೋಗಿವೆ.

ರಮೇಶ್, ನಂಗಲಿ ಕೆರೆಯ ಮೀನು ಗುತ್ತಿಗೆದಾರ

ದಿನಗೂಲಿ ಸುಲಭ

ನಂಗಲಿ ಕೋಡಿಯಿಂದ ಹರಿದು ಬರುವ ನೀರಿನಲ್ಲಿ ಪ್ರತಿದಿನ ಬಲೆಗಳು, ಕೊಡಗಳು ಹಾಗೂ ಗಾಲಗಳಿಂದ ಭಾರೀ ಪ್ರಮಾಣದಲ್ಲಿ ಮೀನುಗಳು ಸಿಗುತ್ತಿವೆ. ಇದರಿಂದ ಮನೆಗೆ ಸ್ವಲ್ಪ ಮೀನನ್ನು ಎತ್ತಿಕೊಂಡು ಉಳಿದ ಮೀನುಗಳನ್ನು ಮುಳಬಾಗಿಲು ಮತ್ತು ನಂಗಲಿಯಲ್ಲಿ ಮಾರಲಾಗುತ್ತದೆ. ಇದರಿಂದ ದಿನದ ಕೂಲಿಯೂ ಸುಲಭವಾಗಿ ಸಿಗುತ್ತಿದೆ.

ಕೋದಂಡ, ಜಿ.ಮಾರಾಂಡಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.