ADVERTISEMENT

ಕೋಲಾರ: ಮುಂದುವರಿದ ಸಾರಿಗೆ ನೌಕರರ ಮುಷ್ಕರ

2ನೇ ದಿನವೂ ರಸ್ತೆಗಿಳಿಯದ ಕೆಎಸ್ಆರ್‌ಟಿಸಿ ಬಸ್‌: ಪ್ರಯಾಣಿಕರು ಹೈರಾಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:51 IST
Last Updated 8 ಏಪ್ರಿಲ್ 2021, 16:51 IST
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಕೋಲಾರದಲ್ಲಿ ಗುರುವಾರ ಖಾಸಗಿ ಬಸ್‌ಗಳಿಗೆ ಮುಗಿಬಿದ್ದರು.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಕೋಲಾರದಲ್ಲಿ ಗುರುವಾರ ಖಾಸಗಿ ಬಸ್‌ಗಳಿಗೆ ಮುಗಿಬಿದ್ದರು.   

ಕೋಲಾರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ ಗುರುವಾರ ಜನಜೀವನಕ್ಕೆ ಹೆಚ್ಚಿನ ತೊಂದರೆಯಾಯಿತು.

ಜಿಲ್ಲೆಯ ಕೆಎಸ್‌ಆರ್‌ಟಿಸಿ ಡಿಪೊಗಳಲ್ಲಿ ಬಸ್‌ಗಳು ನಿಂತಲ್ಲೇ ನಿಂತಿದ್ದು, ಸಿಬ್ಬಂದಿ ಗುರುವಾರ ಸಹ ಕೆಲಸಕ್ಕೆ ಹಾಜರಾಗಲಿಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತರಬೇತಿ ಹಂತದ ಚಾಲಕರು ಮತ್ತು ನಿರ್ವಾಹಕರಿಗೆ ಷೋಕಾಸ್‌ ನೋಟಿಸ್ ಜಾರಿ ಮಾಡಿ, ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರೂ ಮುಷ್ಕರನಿರತ ಸಿಬ್ಬಂದಿ ಕೆಲಸಕ್ಕೆ ಬರುವ ಮನಸ್ಸು ಮಾಡಲಿಲ್ಲ.

ಮುಷ್ಕರದ ಸಂಗತಿ ತಿಳಿದಿದ್ದ ಸಾರ್ವಜನಿಕರು ಖಾಸಗಿ ಬಸ್‌ ಹಾಗೂ ವಾಹನಗಳ ಮೊರೆ ಹೋದರು. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಎಂದಿಗಿಂತ ಹೆಚ್ಚಿನ ಜನಸಂದಣಿ ಕಂಡುಬಂತು. ಖಾಸಗಿ ವಾಹನಗಳ ಮಾಲೀಕರು ಮುಷ್ಕರದ ಲಾಭ ಪಡೆದು ಸಾರ್ವಜನಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದ್ದುದ್ದು ಎಲ್ಲೆಡೆ ಸಾಮಾನ್ಯವಾಗಿತ್ತು.

ADVERTISEMENT

ಬಹುಪಾಲು ಪ್ರಯಾಣಿಕರು ಮುಷ್ಕರದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳತ್ತ ಸುಳಿಯಲಿಲ್ಲ. ಮುಷ್ಕರ ಮುಂದುವರಿದಿರುವ ಸಂಗತಿ ತಿಳಿಯದ ಗ್ರಾಮೀಣ ಭಾಗದ ಜನ ನಿಲ್ದಾಣದಲ್ಲಿ ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡುಬಂತು. ರೋಗಿಗಳು ಹಾಗೂ ಅವರ ಸಂಬಂಧಿಕರು ಅನ್ಯ ಮಾರ್ಗವಿಲ್ಲದೆ ಆಟೊಗಳಲ್ಲಿ ಪ್ರಯಾಣಿಸಿದರು. ಗ್ರಾಮೀಣ ಭಾಗದ ಜನ ಸರಕು ಸಾಗಣೆ ವಾಹನ, ಟೆಂಪೊಗಳನ್ನು ಆಶ್ರಯಿಸಿದರು.

ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಮುಷ್ಕರದ ಕಾರಣಕ್ಕೆ ಭಣಗುಡುತ್ತಿದ್ದವು. ಮಕ್ಕಳು ನಿಲ್ದಾಣಗಳಲ್ಲಿ ಕ್ರಿಕೆಟ್‌ ಆಡಿ ಸಂಭ್ರಮಿಸಿದರು. ಮತ್ತೆ ಕೆಲ ಮಕ್ಕಳು ನಿಲ್ದಾಣದಲ್ಲಿ ಸೈಕಲ್‌ ಹೊಡೆಯುತ್ತಿದ್ದ ದೃಶ್ಯ ಕಂಡುಬಂತು. ನಿಲ್ದಾಣದಲ್ಲಿನ ಅಂಗಡಿಗಳು ಹಾಗೂ ಹೋಟೆಲ್‌ಗಳು ಮುಚ್ಚಿದ್ದವು.

ಆದಾಯ ಖೋತಾ: ಪೊಲೀಸ್ ಹಾಗೂ ಇಲಾಖೆ ವಾಹನಗಳ ಭದ್ರತೆಯಲ್ಲಿ ಜಿಲ್ಲೆಯ ವಿವಿಧೆಡೆ ಗುರುವಾರ 6 ಬಸ್‌ ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಕೋಲಾರದಿಂದ ಮಾಲೂರಿಗೆ ಹೋಗುತ್ತಿದ್ದ ಬಸ್‌ನ ಮೇಲೆ ಚಲುವನಹಳ್ಳಿ ಗೇಟ್‌ ಬಳಿ ದುಷ್ಕರ್ಮಿಗಳು ಕಲ್ಲು ತೂರಿದ್ದರಿಂದ ಅಧಿಕಾರಿಗಳು ಎಲ್ಲಾ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದರು.

‘ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿ ಕರ್ತವ್ಯಕ್ಕೆ ಗೈರಾದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದೇವೆ. ಸಿಬ್ಬಂದಿಯ ಮನೆಗಳಿಗೆ ಹೋಗಿ ಕೆಲಸಕ್ಕೆ ಬರುವಂತೆ ಮನವಿ ಸಹ ಮಾಡಿದ್ದೇವೆ. ಆದರೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. 2 ದಿನದ ಮುಷ್ಕರದಿಂದ ಸಂಸ್ಥೆಗೆ ಆದಾಯ ಖೋತಾ ಆಗಿದೆ’ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ನಿಲ್ದಾಣಗಳಿಂದಲೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಬಸ್‌ ಡಿಪೊ ಹಾಗೂ ನಿಲ್ದಾಣಗಳ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮುಂದುವರಿಸಲಾಗಿದೆ. ಅಲ್ಲದೇ, ಡಿಪೊಗಳ ಪ್ರವೇಶದ್ವಾರ ಬಂದ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.