
ಕೋಲಾರ: ಗದಗ ಜಿಲ್ಲೆಯಲ್ಲಿ ಕಮಿಷನ್ ಕೇಳಿ ಶಾಸಕರು ಲೋಕಾಯುಕ್ತ ಬಲೆಗೆ ಬಿದ್ದಂತೆ ಎಲ್ಲಾ ಜಿಲ್ಲೆಗಳಲ್ಲಿ ಒಬ್ಬರು, ಇಬ್ಬರು ಶಾಸಕರು ಸಿಗುತ್ತಾರೆ. ಭೂಮಿಪೂಜೆ ನೆಪದಲ್ಲಿ ಗುತ್ತಿಗೆದಾರರ ಮೇಲೆ ಪರ್ಸೆಂಟೇಜ್ ವಿಚಾರವಾಗಿ ದೌರ್ಜನ್ಯ ಎಸಗುವ ಅಂಥ ಶಾಸಕರು ಮೂರೂ ಪಕ್ಷಗಳಲ್ಲಿ ಇದ್ದು, ಅವರ ಹೆಸರನ್ನು ಮುಖ್ಯಮಂತ್ರಿ ಕೇಳಿದರೆ ಬಹಿರಂಗಪಡಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಾಕಿ ಹಣ ಬಿಡುಗಡೆಗೆಂದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಈ ಹೊತ್ತಿನಲ್ಲಿ ಶಾಸಕರನ್ನು ಲೋಕಾಯುಕ್ತರಿಗೆ ಹಿಡಿದು ಕೊಟ್ಟ ಆ ಗುತ್ತಿಗೆದಾರ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ರಾಜ್ಯ ಸಂಘ ಬೆಂಬಲಿಸಲಿದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಈ ರೀತಿ ಪ್ರಕರಣ ಕಾಣಬಹುದು. ಕೆಲವೆಡೆ ಶಾಸಕರೇ ಗುತ್ತಿಗೆದಾರರಾಗಿರುವ ವಿಚಾರವೂ ನಮಗೆ ಗೊತ್ತಿದೆ’ ಎಂದರು.
ನಾವು ಯಾವುದಕ್ಕೂ ಪರ್ಸೆಂಟೇಜ್ ನಿಗದಿ ಮಾಡುವುದಿಲ್ಲ. ಆದರೆ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕೆಲ ಇಲಾಖೆಗಳಲ್ಲಿ ಹಿಂದಿನ ಸರ್ಕಾರಕ್ಕಿಂತ ಮೂರು ಪಟ್ಟು ಕಮಿಷನ್ ಕೇಳುತ್ತಾರೆ. ನಮ್ಮಲ್ಲಿ ಒಂದೂವರೆ ಲಕ್ಷ ಗುತ್ತಿಗೆದಾರರು ಇದ್ದು, ಎಲ್ಲರೂ ಸಣ್ಣ ಹಾಗೂ ಮಧ್ಯಮ ವರ್ಗದವರು. ಆ ವಿಚಾರ ಪ್ರಸ್ತಾಪ ಮಾಡಿದರೆ ನಮಗೆ ಹಣ ಬರಲು ಮತ್ತೆ ಎರಡು ವರ್ಷ ಹಿಡಿಯುತ್ತದೆ. ಆ ತಪ್ಪು ನಾವು ಮಾಡಲ್ಲ ಎಂದು ತಿಳಿಸಿದರು.
ಮೂರು ವರ್ಷಗಳಿಂದ ₹ 37 ಸಾವಿರ ಕೋಟಿ ಬಾಕಿ ಇದೆ. ಮಾರ್ಚ್ 6ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಆಗಲೂ ಬಿಡುಗಡೆ ಮಾಡದಿದ್ದರೆ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ಮಾಡುತ್ತೇವೆ. ಯಾವ ಯಾವ ಇಲಾಖೆಯಲ್ಲಿ ಎಷ್ಟು ಪರ್ಸೆಂಟೇಜ್ ಕೇಳುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾವು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ನಾವೇನು ಸಾಲ, ಬಡ್ಡಿ ಕೇಳುತ್ತಿಲ್ಲ, ಕೆಲಸ ಮಾಡಿದ ಕೂಲಿ ಕೊಡಿ ಎಂಬುದಾಗಿ ಒತ್ತಾಯಿಸುತ್ತಿದ್ದೇವೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘ ಗೌರವಾಧ್ಯಕ್ಷ ಕೃಷ್ಣಾರೆಡ್ಡಿ ಹಾಗೂ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.