ADVERTISEMENT

ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ

ಒಗ್ಗೂಡಿಸುವಿಕೆ ಮಾಹಿತಿ ಕಾರ್ಯಾಗಾರದಲ್ಲಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 9:53 IST
Last Updated 24 ಫೆಬ್ರುವರಿ 2020, 9:53 IST
ಕೋಲಾರ ತಾಲ್ಲೂಕಿನ ಹರಟಿ ಗ್ರಾ.ಪಂನಲ್ಲಿ ಸೋಮವಾರ ನಡೆದ ಪಂಚಾಯತ್ ರಾಜ್ ಮತ್ತು ಸ್ವ ಸಹಾಯ ಸಂಘಗಳ ಒಗ್ಗೂಡಿಸುವಿಕೆ ಮಾಹಿತಿ ಕಾರ್ಯಾಗಾರದಲ್ಲಿ ಆರ್.ಗ್ರಾ.ಪಂ ಅಧ್ಯಕ್ಷ ವೆಂಕಟೇಶಪ್ಪ ಮಾತನಾಡಿದರು.
ಕೋಲಾರ ತಾಲ್ಲೂಕಿನ ಹರಟಿ ಗ್ರಾ.ಪಂನಲ್ಲಿ ಸೋಮವಾರ ನಡೆದ ಪಂಚಾಯತ್ ರಾಜ್ ಮತ್ತು ಸ್ವ ಸಹಾಯ ಸಂಘಗಳ ಒಗ್ಗೂಡಿಸುವಿಕೆ ಮಾಹಿತಿ ಕಾರ್ಯಾಗಾರದಲ್ಲಿ ಆರ್.ಗ್ರಾ.ಪಂ ಅಧ್ಯಕ್ಷ ವೆಂಕಟೇಶಪ್ಪ ಮಾತನಾಡಿದರು.   

ಕೋಲಾರ: ‘ಗ್ರಾಮಾಂತರ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಹಕಾರ ಹೆಚ್ಚು ಅಗತ್ಯವಿದ್ದು, ಸ್ಥಳೀಯ ಸಂಸ್ಥೆಯೊಂದಿಗೆ ಜತೆಗೂಡಿ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ವೆಂಕಟೇಶಪ್ಪ ಮನವಿ ಮಾಡಿದರು.

ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪಂಚಾಯತ್ ರಾಜ್ ಮತ್ತು ಸ್ವ ಸಹಾಯ ಸಂಘಗಳ ಒಗ್ಗೂಡಿಸುವಿಕೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಮಹಿಳೆಯರು ಸಬಲಿಕರಣಗೊಂಡಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು.

‘ಮಹಿಳೆಯರ ಸಬಲಿಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನೆ ಪಡೆದುಕೊಂಡು ಸ್ವಾವಲಂಭಿ ಬದುಕು ರೂಪಿಸಿಕೊಳ್ಳಬೇಕು. ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ಸ್ವಯಂ ಉದ್ಯೋಗ ಕೈಗೊಂಡು ಮತ್ತಷ್ಟು ಮಂದಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಸ್ವಸಹಾಯ ಸಂಘಗಳು ಕೈಜೋಡಿಸಿ ದುಡಿದರೆ ಗ್ರಾಮೀಣ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಸುಲಭವಾಗುತ್ತದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯ ಆಶೋತ್ತರಗಳನ್ನು ಈಡೇರಿಸಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಕೋಟಿಗಾನಹಳ್ಳಿ ಗ್ರಾ.ಪಂ ಸದಸ್ಯ ಕೆ.ವೈ.ಗಣೇಶ್‌ಗೌಡ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ವತಿಯಿಂದ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿನ ಮಹಿಳಾ ಸಂಘಗಳಿಗೆ ಸಾಲ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಮಹಿಳೆಯರು ಸಾಮಾಜಿಕ ವ್ಯವಹಾರಗಳ ಮೂಲಕ ಅರ್ಥಿಕ ಭದ್ರತೆ ಹಾಗೂ ಸಮಾಜದ ಅಭಿವೃದ್ಧಿಯ ಶಿಲ್ಪಿಯಾಗಿ ಮುಂದುವರಿಯುತ್ತಿದ್ದಾರೆ. ಜತೆಗೆ ಗ್ರಾಮ ಪಂಚಾಯಿತಿಯೊಟ್ಟಿಗೆ ಉತ್ತಮ ಭಾಂಧವ್ಯ ಹೊಂದಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುವ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಸ್ವಸಹಾಯ ಸಂಘಗಳು ಸಮುದಾಯದ ಮತ್ತು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದೆ’ ಎಂದು ಹೇಳಿದರು.

ಸಂಸ್ಥೆಯು ಮಹಿಳಾ ಸ್ವಸಹಾಯ ಗುಂಪುಗಳಲ್ಲಿನ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬುವ ಮೂಲಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಹಿಳೆಯರು ಹೆಚ್ಚು ಜಾಗೃತರಾಗಿ ಕುಟುಂಬದ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್, ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ವಿ.ಗಂಗಾಧರ್, ಮಹಿಳಾ ಸ್ವಸಹಾಯ ಸಂಘಗಳ ಮುಖ್ಯಸ್ಥರಾದ ಶಾಂತಮ್ಮ, ರಂಜಿತಾ, ಶೈಲಜಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.