ಕೆಜಿಎಫ್: ಕೋರಮಂಡಲ್‌ನಿಂದ ರಾಬರ್ಟ್‌ಸನ್‌ಪೇಟೆಗೆ ಬರುವ ಜೋಡಿ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ಐದು ತಿಂಗಳಿಂದ ರಸ್ತೆ ದೂಳುಮಯವಾಗಿದೆ. ಬೀದಿ ದೀಪಗಳು ಕೂಡ ಇಲ್ಲದೆ ಇರುವುದರಿಂದ ಈ ಪ್ರದೇಶ ಅಪಘಾತಗಳ ವಲಯವಾಗಿ ಮಾರ್ಪಟ್ಟಿದೆ.
ಕೋರಮಂಡಲ್‌ನಿಂದ ಅಶೋಕನಗರದವರೆಗಿನ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ರಸ್ತೆಯ ಎರಡೂ ಬದಿಯಲ್ಲಿ ಡಾಂಬರನ್ನು ಕಿತ್ತು ಹಾಕಿ, ಜಲ್ಲಿಕಲ್ಲು ಹಾಕಲಾಗಿದೆ. ರಸ್ತೆ ಅಕ್ಕಪಕ್ಕದಲ್ಲಿ ನೀರಿನ ಜೌಗು ಪ್ರದೇಶವಿದ್ದು, ರಸ್ತೆ ಸದಾ ಹಾಳಾಗುತ್ತಿತ್ತು. ಹೀಗಾಗಿ, ಕಾಮಗಾರಿ ಕೈಗೊಂಡ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ನೀರಿನ ಸೋರಿಕೆ ತಡೆಯಲು ಪ್ರಯತ್ನಿಸುುತ್ತಿದೆ. ಜನವರಿ ತಿಂಗಳಿನಲ್ಲಿ ರಸ್ತೆಯಲ್ಲಿದ್ದ ಡಾಂಬರು ತೆಗೆಯಲಾಯಿತು. ಜೋಡಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ನಂತರ ಎರಡೂ ಕಡೆಗಳಲ್ಲಿ ಡಾಂಬರು ಕಿತ್ತುಹಾಕಲಾಯಿತು. ಹೊಸ ರಸ್ತೆ ನಿರ್ಮಾಣಕ್ಕಾಗಿ ಜಲ್ಲಿಕಲ್ಲುಗಳನ್ನೂ ಹಾಕಲಾಯಿತು. ರಸ್ತೆ ಮಧ್ಯೆ ರಸ್ತೆ ವಿಭಜಕವನ್ನು ಸಿಮೆಂಟ್‌ನಿಂದ ಕಟ್ಟಲಾಯಿತು. ಕಾಮಗಾರಿಗೆ ಅನುವು ಮಾಡಿಕೊಡಲು ಬೀದಿ ದೀಪಗಳ ಸಂಪರ್ಕ ಸ್ಥಗಿತಗೊಳಿಸಲಾಯಿತು.
ಅಲ್ಲದೆ ಸ್ಕೂಲ್ ಆಫ್ ಮೈನ್ಸ್, ವಿನಾಯಕ ಎಂಜಿನಿಯರಿಂಗ್ ಕಾಲೇಜು, ಕೋರಮಂಡಲ್ ಚರ್ಚ್ ಮೊದಲಾದ ಪ್ರದೇಶಗಳಿಗೆ ಕೂಡ ಇದೇ ಸಂಪರ್ಕ ರಸ್ತೆ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಇದೇ ಆಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಳೆಯಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಬೀದಿ ದೀಪಗಳ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ರಸ್ತೆ ನಿರ್ಮಾಣದ ನಂತರ ಬೀದಿ ದೀಪಗಳಿಗೆ ಸಂಪರ್ಕ ನೀಡಲಾಗುತ್ತದೆ ಎಂದು ನಗರಸಭೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದಿದೀಪಗಳ ಸ್ಥಗಿತ: ಕಗ್ಗತ್ತಲ ರಸ್ತೆ
ನಗರಸಭೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಬೀದಿ ದೀಪಗಳ ಕಾಮಗಾರಿಯನ್ನು ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು. ಆದರೆ ಇದಾಗಿ ಕೇವಲ ಎಂಟು ದಿನಗಳಲ್ಲಿ ಬೀದಿ ದೀಪಗಳ ಸಂಪರ್ಕ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ರಸ್ತೆಯಲ್ಲಿ ಕಗ್ಗತ್ತಲು ಆವರಿಸಿತು. ಜಲ್ಲಿ ಕಲ್ಲುಗಳ ಮೇಲೆ ಹಾದುಹೋಗುವ ಬೈಕ್ ಸವಾರರು ಸಣ್ಣಪುಟ್ಟ ಅಪಘಾತಕ್ಕೆ ಒಳಗಾಗುವ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಸಮೀಪದಲ್ಲಿ ಇರುವ ಕೋರಮಂಡಲ್ ರೈಲ್ವೆ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬರುತ್ತಾರೆ. ರೈಲ್ವೆ ನಿಲ್ದಾಣದಿಂದ ಕೆನಡೀಸ್ ಲೈನ್ ಅಶೋಕನಗರ ಸ್ವಾಮಿನಾಥಪುರಂ ಊರಿಗಾಂಪೇಟೆ ಮತ್ತು ರಾಬರ್ಟ್‌ಸನ್‌ಪೇಟೆಯ ಹಲವು ಬಡಾವಣೆಗಳಿಗೆ ಬರುವ ಪ್ರಯಾಣಿಕರು ಕತ್ತಲಲ್ಲಿ ಪ್ರಯಾಣಿಸುವಂತಾಗಿದೆ. ಬೈಕ್ ಸವಾರರು ಬೀದಿನಾಯಿಗಳ ಕಾಟವನ್ನೂ ಎದುರಿಸುತ್ತಾರೆ. ಕತ್ತಲಿನಲ್ಲಿ ನಾಯಿಗಳ ಕಾಟ ತಪ್ಪಿಸಲು ವೇಗವಾಗಿ ಹೋಗಿ ವಾಹನ ಸವಾರರು ವೇಗವಾಗಿ ಹೋಗಿ ಬಿದ್ದಿರುವ ಘಟನೆಗಳು ನಡೆದಿವೆ ಎನ್ನುತ್ತಾರೆ ಪ್ರಯಾಣಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.