ADVERTISEMENT

ಕೋಲಾರ ಜಿಲ್ಲೆಯಲ್ಲಿ 63 ಮಂದಿಗೆ ಕೊರೊನಾ ಸೋಂಕು

ಉಪ ವಿಭಾಗಾಧಿಕಾರಿ– ಪೊಲೀಸ್‌ ಸಿಬ್ಬಂದಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:50 IST
Last Updated 19 ಆಗಸ್ಟ್ 2020, 16:50 IST

ಕೋಲಾರ: ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಹೊಸದಾಗಿ 63 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಬುಧವಾರ ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 870ಕ್ಕೆ ಏರಿಕೆಯಾಗಿದೆ.

ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದ ಉಪ ವಿಭಾಗಾಧಿಕಾರಿಯು ಬೆಂಗಳೂರಿನಿಂದ ಮೂರ್ನಾಲ್ಕು ದಿನಗಳ ಹಿಂದೆ ಕರ್ತವ್ಯಕ್ಕೆ ಮರಳಿದ್ದರು. ನಂತರ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಕೋವಿಡ್‌ ತಪಾಸಣೆ ಮಾಡಿಸಿದಾಗ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಮತ್ತೊಂದೆಡೆ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ, ಜಿಲ್ಲಾಡಳಿತ ಭವನದಲ್ಲಿನ ಮುಜರಾಯಿ ಇಲಾಖೆ ಮತ್ತು ಚುನಾವಣಾ ಶಾಖೆ ಸಿಬ್ಬಂದಿಗೂ ಸೋಂಕು ಹರಡಿದೆ. ಅಲ್ಲದೇ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಡಿಎಆರ್‌) ಸಿಬ್ಬಂದಿಗೆ ಸೋಂಕು ತಗುಲಿದೆ. ಆದರೆ, ಇವರೆಲ್ಲರ ಸೋಂಕಿನ ಮೂಲ ಪತ್ತೆಯಾಗಿಲ್ಲ.

ADVERTISEMENT

ಜಿಲ್ಲೆಯಲ್ಲಿ ವಿಷಮ ಶೀತ ಜ್ವರವು ಅಪಾಯಕಾರಿ ಪರಿಣಮಿಸಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 40 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಸೋಂಕಿತರ ಸಂಪರ್ಕವು ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಸೋಂಕಿತರ ಸಂಪರ್ಕದಿಂದ 15 ಮಂದಿಗೆ ಸೋಂಕು ಹರಡಿದೆ. ಉಳಿದಂತೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಬಂದಿರುವುದು ದೃಢಪಟ್ಟಿದೆ.

ಕೋಲಾರದಲ್ಲಿ ಹೆಚ್ಚು: ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 34 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 13 ಮಂದಿ, ಸೋಂಕಿತರ ಸಂಪರ್ಕದಿಂದ 13 ಮಂದಿ, 7 ಮಂದಿ ಪೊಲೀಸ್‌ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಹರಡಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ 3 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ, ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಪೀಡಿತ 11 ಮಂದಿಗೆ ಹಾಗೂ ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ.

ಮಾಲೂರು ತಾಲ್ಲೂಕಿನ 3 ಮಂದಿ, ಕೆಜಿಎಫ್‌ ತಾಲ್ಲೂಕಿನ 9 ಮಂದಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿದೆ. ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.