ADVERTISEMENT

ಪರಿಷತ್‌ ಚುನಾವಣೆ: ಬಲಿಪಶು ಆಗಿಲ್ಲ- ಬಿಜೆಪಿ ಪರಾಜಿತ ಅಭ್ಯರ್ಥಿ ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 14:13 IST
Last Updated 20 ಡಿಸೆಂಬರ್ 2021, 14:13 IST

ಕೋಲಾರ: ‘ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರಲಿಲ್ಲ.ನಮ್ಮ ಪಕ್ಷ ಗೆಲ್ಲುವ ವಾತಾವರಣ ಸೃಷ್ಟಿಸಿತ್ತು. ಆದರೆ, ಅದಕ್ಕೆ ಜೆಡಿಎಸ್‌ನವರು ಪೆಟ್ಟು ಕೊಟ್ಟರು’ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಮತದಾರರಿಂದ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿಲ್ಲ, ಹಣ ಹಂಚಿಲ್ಲ. ಚುನಾವಣೆಯಲ್ಲಿ ಸೋತ ಕಾರಣಕ್ಕೆ ನಾನು ಮುಖ್ಯಮಂತ್ರಿಗಳ ಮುಂದೆ ವಿಷ ಕುಡಿಯುತ್ತೇನೆ ಎಂದು ಹೇಳಿಲ್ಲ. ಚುನಾವಣೆಯಲ್ಲಿ ನಾನು ಬಲಿಪಶು ಆಗಿಲ್ಲ’ ಎಂದು ಹೇಳಿದರು.

‘ಸಂಸದ ಮುನಿಸ್ವಾಮಿ ಕಾಂಗ್ರೆಸ್‌ ಜತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಆದರೆ, ಇದು ಜೆಡಿಎಸ್‌ ಮುಖಂಡರು ಸೃಷ್ಟಿಸಿರುವ ವದಂತಿ. ಪರಿಷತ್‌ ಚುನಾವಣೆ ವೇಳೆ ಜೆಡಿಎಸ್‌ ಮುಖಂಡರೇ ನಮ್ಮ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆದರೆ, ನಾವು ಒಪ್ಪಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಜೆಡಿಎಸ್‌ನವರು ಗಂಭೀರವಾಗಿ ಚುನಾವಣೆ ಮಾಡಿದ್ದರೆ ಗೆಲ್ಲುತ್ತಿದ್ದರು. ಆದರೆ, ಮತದಾನಕ್ಕೆ 2 ದಿನ ಬಾಕಿ ಇರುವಾಗ ಏಕಾಏಕಿ ಮತದಾರರಿಗೆ ಆಮಿಷವೊಡ್ಡಿ ಬಿಜೆಪಿಗೆ ಬರಬೇಕಿದ್ದ ಮತಗಳನ್ನು ಕಸಿದುಕೊಂಡಿದ್ದರಿಂದ ನಾನು ಸೋಲಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪರೋಕ್ಷವಾಗಿ ಜೆಡಿಎಸ್ ಮುಖಂಡರೇ ಕಾರಣ’ ಎಂದು ದೂರಿದರು.

‘ಜೆಡಿಎಸ್‌ ಜತೆಗಿನ ಮೈತ್ರಿ ವಿಚಾರವಾಗಿ ನಾನು ಅಥವಾ ಸಂಸದ ಮುನಿಸ್ವಾಮಿ ಅವರು ಮುಖ್ಯಮಂತ್ರಿಯವರ ಜತೆ ಚರ್ಚೆ ಮಾಡಿಲ್ಲ, ಅವರ ಮನೆಗೂ ಹೋಗಿಲ್ಲ. ಯಡಿಯೂರಪ್ಪ ಅವರು ನನಗೆ ಕರೆ ಮಾಡಿಲ್ಲ. ಸಂಸದರು ಮತ್ತು ಕಾಂಗ್ರೆಸ್ ಶಾಸಕ ರಮೇಶ್‌ಕುಮಾರ್‌ ಅವರು ಚನ್ನಸಂದ್ರ ರಸ್ತೆಯಲ್ಲಿ ಒಂದೇ ಕಾರಿನಲ್ಲಿಹೋಗಿದ್ದಾರೆ ಎಂಬ ವಿಷಯ ಸಹ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ’ ಎಂದರು.

ಮುನಿಸಿಕೊಂಡಿಲ್ಲ: ‘ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಆಧರಿಸಿ ಮತ ಯಾಚಿಸಿದ್ದರಿಂದ ಗೆಲುವಿನ ಸಮೀಪಕ್ಕೆ ಹೋಗಿದ್ದೇವೆ. ಅವಳಿ ಜಿಲ್ಲೆಯ ಬಿಜೆಪಿ ಸಂಸದರು, ಉಸ್ತುವಾರಿ ಸಚಿವರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಚುನಾವಣೆ ಎದುರಿಸಿದ್ದರಿಂದಲೇ ನಾವು ಮತ ಗಳಿಕೆಯಲ್ಲಿ 2ನೇ ಸ್ಥಾನಕ್ಕೆ ಹೋಗಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.

‘ಜೆಡಿಎಸ್ ಪಕ್ಷದವರು ನಮಗೆ ಸ್ವಲ್ಪ ಸಹಕಾರ ಕೊಟ್ಟಿದ್ದರೆ ಖಂಡಿತ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಿರಲಿಲ್ಲ. ನಮಗೆ ಪ್ರಬಲ ಎದುರಾಳಿಯಾಗಿದ್ದ ಕಾಂಗ್ರೆಸ್ ಪಕ್ಷದ ಜತೆ ಒಳ ಒಪ್ಪಂದ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘ನಾನು ರಾಜಕೀಯ ಪ್ರವೇಶಿಸಿದ ಆರಂಭದಲ್ಲೇ ಪಕ್ಷವು ನನಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೊಟ್ಟಿತ್ತು. ನಂತರ ಜಿಲ್ಲಾ ಅಧ್ಯಕ್ಷ ಸ್ಥಾನ ಕೊಟ್ಟಿತು. ಇದೀಗ ಪರಿಷತ್‌ ಚುನಾವಣೆಗೆ ಟಿಕೆಟ್ ಕೊಟ್ಟಿದೆ. ಇಷ್ಟೆಲ್ಲಾ ಅವಕಾಶ ಕಲ್ಪಿಸಿರುವ ಬಿಜೆಪಿ ಮುಖಂಡರ ವಿರುದ್ಧ ನಾನೇಕೆ ಮುನಿಸಿಕೊಳ್ಳಲಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನಿಷ್ಠ 8 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.