ADVERTISEMENT

ಕೋವಿಡ್‌: 3ನೇ ಹಂತದ ಲಸಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 15:53 IST
Last Updated 1 ಮಾರ್ಚ್ 2021, 15:53 IST
ಕೋಲಾರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ 3ನೇ ಹಂತದ ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಾಯಿತು.
ಕೋಲಾರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ 3ನೇ ಹಂತದ ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಾಯಿತು.   

ಕೋಲಾರ: ‘ಜಿಲ್ಲೆಯಲ್ಲಿ ಸೋಮವಾರದಿಂದ 3ನೇ ಹಂತದ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷದಿಂದ 59 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದೆಲ್ಲೆಡೆ ಜ.16ರಿಂದ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗಿತ್ತು. ಮೊದಲನೇ ಮತ್ತು ಎರಡನೇ ಹಂತದ ಲಸಿಕೆ ನೀಡುವಿಕೆಯಲ್ಲಿ ಬಿಟ್ಟು ಹೋದ, ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು 3ನೇ ಹಂತದಲ್ಲಿ ಸೂಚಿತ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು’ ಎಂದರು.

‘60 ವರ್ಷ ಮೇಲ್ಪಟ್ಟ ವಯೋವೃದ್ದರಿಗೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಆಸಕ್ತರು ಜನ್ಮ ದಿನಾಂಕ ಸೂಚಿಸುವ ಯಾವುದಾದರೂ ದಾಖಲೆಪತ್ರ ಹೊಂದಿರಬೇಕು. 45 ವರ್ಷದಿಂದ 59 ವರ್ಷದೊಳಗಿನ ವ್ಯಕ್ತಿಗಳು ಅಸ್ವಸ್ಥೆತೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ವೈದ್ಯರಿಂದ ಆ ಬಗ್ಗೆ ಕಡ್ಡಾಯವಾಗಿ ದಾಖಲೆಪತ್ರ ಪಡೆದು ಸಲ್ಲಿಸಿ ಲಸಿಕೆ ಪಡೆಯಬಹುದು’ ಎಂದು ಹೇಳಿದರು.

ADVERTISEMENT

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆಗೆ ₹ 250 ನಿಗದಿಪಡಿಸಲಾಗಿದೆ. ಜಿಲ್ಲೆಯ ದೇವರಾಜ ಅರಸು ವೈದ್ಯಕೀಯ ಕಾಲೇಜು, ಸಂಭ್ರಮ್‌ ವೈದ್ಯಕೀಯ ಕಾಲೇಜು, ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಕೆಜಿಎಫ್‌ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕು ಆಸ್ಪತ್ರೆ ಲಸಿಕೆ ಪಡೆಯಬಹುದು’ ಎಂದು ವಿವರಿಸಿದರು.

‘ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ 4 ದಿನ ಮಾತ್ರ ಲಸಿಕೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಏಳೂ ದಿನ ಲಸಿಕೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.