ADVERTISEMENT

ಕೋಲಾರ: ಕೋವಿಡ್‌ ಲಸಿಕೆ ವಿತರಣೆ ಸುಸೂತ್ರ

ಜಿಲ್ಲೆಯ 6 ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 14:04 IST
Last Updated 16 ಜನವರಿ 2021, 14:04 IST
ಕೋಲಾರದ ಎಸ್ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡಲಾಯಿತು.
ಕೋಲಾರದ ಎಸ್ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡಲಾಯಿತು.   

ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆಯು ಮೊದಲ ದಿನವಾದ ಶನಿವಾರ ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ನಡೆಯಿತು.

ಆರೋಗ್ಯ ಇಲಾಖೆಯು ಸಾಕಷ್ಟು ಸಿದ್ಧತೆಯೊಂದಿಗೆ ಜಿಲ್ಲೆಯ 6 ಕೇಂದ್ರಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸಿತು. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ಡಿ ಗ್ರೂಪ್‌ ನೌಕರರಾದ ಅನಿತಾ ಅವರು ಜಿಲ್ಲೆಯಲ್ಲಿ ಮೊದಲಿಗರಾಗಿ ಲಸಿಕೆ ಪಡೆದರು.

ಎಸ್‌ಎನ್‌ಆರ್‌ ಆಸ್ಪತ್ರೆ, ಮಾಲೂರು, ಬಂಗಾರಪೇಟೆ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಜೆ 5ರವರೆಗೆ ಲಸಿಕೆ ನೀಡಲಾಯಿತು. ಗರ್ಭಿಣಿ ಹಾಗೂ ಬಾಣಂತಿಯರಾಗಿರುವ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ 18 ವರ್ಷ ಮೇಲ್ಪಟ್ಟವರಿಗೆ ತಲಾ 0.5 ಎಂಎಲ್‌ನ ಒಂದು ಡೋಸ್ ಲಸಿಕೆ ಹಾಕಲಾಯಿತು.

ADVERTISEMENT

ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಯಂತೆ ಮೊದಲ ದಿನ ಒಟ್ಟಾರೆ 600 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯಿತ್ತು. ಆದರೆ, ಪ್ರಕ್ರಿಯೆ ತಡವಾಗಿ ಆರಂಭವಾಗಿದ್ದರಿಂದ 375 ಮಂದಿಗೆ ಮಾತ್ರ ಲಸಿಕೆ ಹಾಕಲು ಸಾಧ್ಯವಾಯಿತು.

ಪ್ರತಿ ಲಸಿಕಾ ಕೇಂದ್ರದಲ್ಲಿ ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಸೇರಿದಂತೆ 3 ಕೊಠಡಿ ಮೀಸಲಿಡಲಾಗಿತ್ತು. ಪ್ರತಿ ಕೇಂದ್ರದಲ್ಲಿ ತಲಾ 5 ಮಂದಿ ಲಸಿಕೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದರು.

ಮಾಸ್ಕ್‌ ಧರಿಸಿ ಕೇಂದ್ರಗಳಿಗೆ ಬಂದ ಫಲಾನುಭವಿಗಳ ದೇಹದ ಉಷ್ಣತೆಯನ್ನು ಸಿಬ್ಬಂದಿಯು ಪರಿಶೀಲಿಸಿದರು. ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತರು ತಮ್ಮ ಪಾಳಿಗಾಗಿ ನಿರೀಕ್ಷಣಾ ಕೊಠಡಿಯಲ್ಲಿ ಕಾದು ಕುಳಿತರು. ನಿರೀಕ್ಷಣಾ ಕೊಠಡಿಯಲ್ಲಿ 5ರಿಂದ 6 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಲಸಿಕೆ ನೀಡಿಕೆ ಬಳಿಕ ಅವರನ್ನು ಅರ್ಧ ತಾಸು ನಿಗಾ ಕೊಠಡಿಯಲ್ಲಿ ಕೂರಿಸಲಾಯಿತು.

ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರ ಕೇಂದ್ರದಿಂದ ಕಳುಹಿಸಲಾಯಿತು. ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಪ್ರತಿನಿತ್ಯದಂತೆ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾದರು.

ಕೋವಿಡ್ ಲಸಿಕೆ ನೀಡಿಕೆಯ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ದಾಖಲಾತಿ ಪರಿಶೀಲನೆ, ಹೆಸರು ನೋಂದಣಿ, ಲಸಿಕೆ ವಿತರಣೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋ–ವಿನ್‌ ತಂತ್ರಾಂಶದಲ್ಲಿ (ಪೋರ್ಟಲ್‌) ದಾಖಲಿಸಲಾಯಿತು.

ಮೊದಲ ಹಂತ: ಬೆಂಗಳೂರಿನಿಂದ ಜಿಲ್ಲೆಗೆ ‘ಕೋವಿಶೀಲ್ಡ್‌’ ಲಸಿಕೆಯ 8 ಸಾವಿರ ಡೋಸ್‌ ಪೂರೈಕೆಯಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ಲಸಿಕೆ ದಾಸ್ತಾನು ಕೇಂದ್ರದಲ್ಲಿ ಲಸಿಕೆ ದಾಸ್ತಾನು ಮಾಡಲಾಗಿದೆ.

ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಸೇರಿದಂತೆ ಮೊದಲ ಹಂತದಲ್ಲಿ 13,180 ಮಂದಿಗೆ ಲಸಿಕೆ ಕೊಡುವ ಗುರಿಯಿದೆ. ಸೋಮವಾರದಿಂದ (ಜ.18) ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.