ADVERTISEMENT

1,161 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ವಿತರಣೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 13:56 IST
Last Updated 18 ಜನವರಿ 2021, 13:56 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ವಿತರಣೆ ಪ್ರಕ್ರಿಯೆ ಮುಂದುವರಿದಿದ್ದು, 2ನೇ ದಿನವಾದ ಸೋಮವಾರ 1,161 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆಯು ಶನಿವಾರ (ಜ.16) ಆರಂಭವಾಗಿತ್ತು. ಮೊದಲ ದಿನ 375 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ 64 ಲಸಿಕೆ ಗುರಿ ಸಾಧನೆಯಾಗಿತ್ತು. ಭಾನುವಾರ ಲಸಿಕೆ ವಿತರಣೆ ಪ್ರಕ್ರಿಯೆ ನಡೆದಿರಲಿಲ್ಲ.

ಮೊದಲ ದಿನ ಜಿಲ್ಲಾ ಕೇಂದ್ರದ ಎಸ್‌ಎನ್ಆರ್‌ ಜಿಲ್ಲಾ ಆಸ್ಪತ್ರೆ, ಮಾಲೂರು, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆ ಮತ್ತು ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 6 ಕಡೆ ಲಸಿಕೆ ಹಾಕಲಾಗಿತ್ತು. ಸೋಮವಾರ ಈ ಕೇಂದ್ರಗಳ ಜತೆಗೆ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 6 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ ಲಸಿಕೆ ನೀಡಲಾಯಿತು.

ADVERTISEMENT

ಕೋಲಾರ ತಾಲ್ಲೂಕಿನಲ್ಲಿ 285 ಆರೋಗ್ಯ ಕಾರ್ಯಕರ್ತರು, ಮಾಲೂರು 222, ಬಂಗಾರಪೇಟೆ 17, ಶ್ರೀನಿವಾಸಪುರ 192, ಮುಳಬಾಗಿಲು 336 ಹಾಗೂ ಕೆಜಿಎಫ್‌ ತಾಲ್ಲೂಕಿನಲ್ಲಿ 109 ಮಂದಿಗೆ ತಲಾ 0.5 ಎಂಎಲ್‌ನ ಒಂದು ಡೋಸ್ ಲಸಿಕೆ ಹಾಕಲಾಯಿತು. ಒಟ್ಟಾರೆ ಆರು ತಾಲ್ಲೂಕುಗಳಿಂದ ಶೇ 62ರಷ್ಟು ಲಸಿಕೆ ಗುರಿ ಸಾಧಿಸಲಾಯಿತು. 61 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನಿರಾಕರಿಸಿದರು.

ಒಟ್ಟಾರೆ 2 ದಿನಗಳಿಂದ 1,536 ಮಂದಿ ಲಸಿಕೆ ಪಡೆದಿದ್ದಾರೆ. ಬುಧವಾರದಿಂದ (ಜ.20) ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಲಾಗಿದೆ.

79ಕ್ಕೆ ಏರಿಕೆ: ಜಿಲ್ಲೆಯಲ್ಲಿ ಹೊಸದಾಗಿ 16 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಸೋಮವಾರ ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.

ಕೋಲಾರ ತಾಲ್ಲೂಕಿನ 8 ಮಂದಿ, ಮಾಲೂರು ತಾಲ್ಲೂಕಿನ 5, ಬಂಗಾರಪೇಟೆ, ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕಿನ ತಲಾ ಒಬ್ಬರಿಗೆ ಸೋಂಕು ಬಂದಿದೆ. ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು. ಕೋಲಾರ ತಾಲ್ಲೂಕಿನ 13, ಮಾಲೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ತಲಾ ಒಬ್ಬರು, ಮುಳಬಾಗಿಲು ತಾಲ್ಲೂಕಿನ ಇಬ್ಬರನ್ನು ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.