ADVERTISEMENT

ಮಾವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 7 ಮೇ 2020, 14:38 IST
Last Updated 7 ಮೇ 2020, 14:38 IST

ಕೋಲಾರ: ‘ಕೊರೊನಾ ಸೋಂಕಿನ ಕಾರಣಕ್ಕೆ ಮಾವಿನ ಬೆಲೆ ಕುಸಿಯುವ ಆತಂಕ ಎದುರಾಗಿದ್ದು, ಸರ್ಕಾರ ಮಾವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಒತ್ತಾಯಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿ ಮಾಡಿದೆ. ಇದರಿಂದ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಜಿಲ್ಲೆಯ ಮಾವು ಬೆಳೆಗಾರರು ಆತಂಕಗೊಂಡಿದ್ದಾರೆ’ ಎಂದು ಹೇಳಿದರು.

‘ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಿದೆ. ಅದೇ ರಾಜ್ಯಗಳಿಂದ ಮಾವು ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಾರೆ. ಅವರೆಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡುವಂತೆ ಎಪಿಎಂಸಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಎಪಿಎಂಸಿ ಆಡಳಿತ ಮಂಡಳಿ ಆರೋಗ್ಯ ತಪಾಸಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ADVERTISEMENT

‘ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ಈ ಬಾರಿ 3 ಲಕ್ಷ ಟನ್ ಮಾವು ಫಸಲು ನಿರೀಕ್ಷಿಸಲಾಗಿದೆ. ಶ್ರೀನಿವಾಸಪುರ ಎಪಿಎಂಸಿ ಆವರಣ ತುಂಬಾ ಕಿರಿದಾಗಿರುವುದರಿಂದ  ಕೊರೊನಾ ಸೋಂಕು ಹರಡುವ ಆತಂಕವಿದೆ’ ಎಂದು ತಿಳಿಸಿದರು.

‘ಶ್ರೀನಿವಾಸಪುರ ಎಪಿಎಂಸಿಯಲ್ಲಿ 150ಕ್ಕೂ ಹೆಚ್ಚು ಮಾವಿನ ಮಂಡಿಗಳಿದ್ದು, ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಕಾರ್ಮಿಕರು, ಮಂಡಿ ಮಾಲೀಕರು, ಲಾರಿ ಚಾಲಕರು ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಹೊರ ರಾಜ್ಯದವರಾಗಿದ್ದು, ನಿಯಮಿತವಾಗಿ ಅವರೆಲ್ಲರ ಆರೋಗ್ಯ ತಪಾಸಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ನೇರ ಖರೀದಿ: ‘ಜಿಲ್ಲೆಯಲ್ಲಿ ಶೇ 70ರಷ್ಟು ಪಲ್ಪ್‌ಗೆ ಅಗತ್ಯವಿರುವ ಮಾವನ್ನು ಬೆಳೆಯುವುದರಿಂದ ಪಲ್ಪ್‌ ಕಾರ್ಖಾನೆಗಳಿಗೆ ನೇರವಾಗಿ ರೈತರ ತೋಟಗಳಿಂದ ಮಾವು ಖರೀದಿ ಮಾಡಲು ಅವಕಾಶ ನೀಡಬೇಕು. ಮಂಡಿ ಮಾಲೀಕರು ಸಹ ನೇರವಾಗಿ ತೋಟಗಳಿಗೆ ಬಂದು ಖರೀದಿ ಮಾಡಿದರೆ ಅಂತರ ಕಾಯ್ದುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ರೈತ ಸಂಘದ ಕಾರ್ಯದರ್ಶಿ ವೀರಭದ್ರಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.