ADVERTISEMENT

ಕಣ್ಗಾವಲಿಗೆ ವಿಶೇಷ ಕಾರ್ಯಪಡೆ ರಚಿಸಿ: ಸಂಸದ ಮುನಿಸ್ವಾಮಿ

ಬೆಂಗಳೂರಿನಿಂದ ಜಿಲ್ಲೆಗೆ ಜನರ ವಲಸೆ: ಸಂಸದ ಮುನಿಸ್ವಾಮಿ ಆದೇಶ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:08 IST
Last Updated 30 ಏಪ್ರಿಲ್ 2021, 13:08 IST
ಸಂಸದ ಎಸ್‌.ಮುನಿಸ್ವಾಮಿ ಕೋವಿಡ್‌ ನಿರ್ವಹಣೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಸಂಸದ ಎಸ್‌.ಮುನಿಸ್ವಾಮಿ ಕೋವಿಡ್‌ ನಿರ್ವಹಣೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜಿಲ್ಲೆಯ ಹಳ್ಳಿಗಳಿಗೆ ಹಿಂದಿರುಗುತ್ತಿರುವವರ ಮೇಲೆ ಕಣ್ಗಾವಲು ಇಡಲು ವಿಶೇಷ ಕಾರ್ಯಪಡೆ ರಚಿಸಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ಆದೇಶಿಸಿದರು.

ಕೋವಿಡ್ ಸಂಬಂಧ ಇಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಜಿಲ್ಲೆಗೆ ಹತ್ತಿರದಲ್ಲಿರುವ ಬೆಂಗಳೂರಿನಲ್ಲಿ ಸುಮಾರು 3 ಸಾವಿರ ಮಂದಿ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಆ ಸೋಂಕಿತರು ಜಿಲ್ಲೆಗೆ ಬಂದಿರುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೋವಿಡ್‌ ಮೊದಲನೇ ಅಲೆಯಲ್ಲಿ ಜಿಲ್ಲೆಯು 41 ದಿನಗಳ ಕಾಲ ಹಸಿರು ವಲಯದಲ್ಲಿತ್ತು. ಆದರೆ, ಕೋವಿಡ್‌ 2ನೇ ಅಲೆಯಲ್ಲಿ ಜಿಲ್ಲೆಯ ಪರಿಸ್ಥಿತಿ ಗಂಭೀರವಾಗಿದೆ. ದಿನಕ್ಕೆ ಸರಾಸರಿ 1 ಸಾವಿರ ಕೊರೊನಾ ಸೋಂಕಿನ ಪ್ರಕರಣ ವರದಿಯಾಗುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜಕೀಯ ಬೇಡ. ಅಧಿಕಾರಿಗಳು, ಜನಪ್ರತಿನಿಧಿಗಳು ಕೋವಿಡ್‌ ವಿರುದ್ಧ ಸಂಘಟಿತರಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಪಡೆ ರಚಿಸಬೇಕು. ಈ ಕಾರ್ಯಪಡೆಯಲ್ಲಿ ಚುನಾಯಿತ ಸದಸ್ಯರು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರು ಇರಬೇಕು. ಪ್ರತಿ ಸೋಮವಾರ ಕಾರ್ಯಪಡೆ ಸಭೆ ನಡೆಸಿ ಕೋವಿಡ್‌ ಪರಿಸ್ಥಿತಿ ಅವಲೋಕಿಸಬೇಕು’ ಎಂದು ಸೂಚಿಸಿದರು.

‘ಕಾರ್ಯಪಡೆ ಸದಸ್ಯರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೆ ಭೇಟಿ ಕೊಟ್ಟು ಬೆಂಗಳೂರಿನಿಂದ ಬಂದಿರುವ ಜನರನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅವರನ್ನು ಶತ್ರುಗಳಂತೆ ಕಾಣಬಾರದು. ಸೋಂಕು ದೃಢಪಟ್ಟವರ ಮನೆಗಳಿಗೆ ಔಷಧ ಮಾತ್ರೆ ತಲುಪಿಸಬೇಕು. ಜನಪ್ರತಿನಿಧಿಗಳು ಮನೆಯಲ್ಲಿ ಕೈಕಟ್ಟಿ ಕೂರದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಮುಲಾಜಿಲ್ಲದೆ ಶಿಸ್ತುಕ್ರಮ: ‘ಗ್ರಾಮಗಳಿಗೆ ದಿಢೀರ್‌ ಭೇಟಿ ಕೊಟ್ಟು ಕಾರ್ಯಪಡೆ ರಚನೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಜನರ ಮಧ್ಯೆ ಹೋಗಿ ಕೆಲಸ ಮಾಡಬೇಕು. ಕಾರ್ಯಪಡೆ ರಚಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಕಾನೂನು ಕಠಿಣವಾದರೆ ಅಪರಾಧ ಚಟುವಟಿಕೆ ಕಡಿಮೆಯಾಗುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ಲಾಕ್‌ಡೌನ್‌ ಸಮರ್ಪಕವಾಗಿ ಜಾರಿಯಾಗದ ಬಗ್ಗೆ ದೂರುಗಳಿವೆ. ಪೊಲೀಸರು ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೊಳಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಓಡಾಡುವವರಿಗೆ ಲಾಠಿ ಏಟಿನ ರುಚಿ ತೋರಿಸಿ. ಆದರೆ, ರೈತರ ಓಡಾಟಕ್ಕೆ ಯಾವುದೇ ಸಮಸ್ಯೆ ಮಾಡಬೇಡಿ’ ಎಂದು ತಿಳಿಸಿದರು.

‘ಎಪಿಎಂಸಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಿ. ಲಾಕ್‌ಡೌನ್‌ ಮತ್ತು ಕೋವಿಡ್‌ ಕಾರಣಕ್ಕೆ ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆಗೆ ಹಾಗೂ ಮಾರಾಟಕ್ಕೆ ತೊಂದರೆಯಾಗುತ್ತಿದೆ. ರೈತರ ಜಮೀನುಗಳಲ್ಲೇ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನ ಖರೀದಿ ಆಗುವಂತೆ ಮಾಡಿ. ರೈತ ಉತ್ಪಾದಕ ಸಂಸ್ಥೆಗಳನ್ನು ಪರಿಣಾಮಕಾರಿ ಬಳಸಿಕೊಳ್ಳಿ. ರೈತರು ಎಪಿಎಂಸಿಗಳಿಗೆ ಬರುವುದು ಕಡಿಮೆಯಾದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಾಯವಾಗುತ್ತದೆ’ ಎಂದರು.

ವಿಳಂಬ ಆಗಬಾರದು: ‘ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಗಡಿ ಭಾಗದಲ್ಲಿ ಆರಂಭಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಬೇಕು. ಚೆಕ್‌ಪೋಸ್ಟ್‌ಗಳಿಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿ. ಕೋವಿಡ್‌ ಪರೀಕ್ಷೆಯ ನಂತರ ವರದಿ ನೀಡಿಕೆಯಲ್ಲಿ ವಿಳಂಬ ಆಗಬಾರದು’ ಎಂದು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ಶೋಭಿತಾ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.