ADVERTISEMENT

ಸೌತೆಕಾಯಿಗೆ ತಟ್ಟಿದ ಬೆಲೆ ಕುಸಿತದ ಬಿಸಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 12:07 IST
Last Updated 4 ನವೆಂಬರ್ 2019, 12:07 IST
ಶ್ರೀನಿವಾಸಪುರದ ಸಂತೆಯಲ್ಲಿ ಶನಿವಾರ ವ್ಯಾಪಾರಿಯೊಬ್ಬರು ಸೌತೆ ಕಾಯಿಗಳನ್ನು ಮಾರಲು ಉಡ್ಡೆ ಇಟ್ಟಿರುವುದು
ಶ್ರೀನಿವಾಸಪುರದ ಸಂತೆಯಲ್ಲಿ ಶನಿವಾರ ವ್ಯಾಪಾರಿಯೊಬ್ಬರು ಸೌತೆ ಕಾಯಿಗಳನ್ನು ಮಾರಲು ಉಡ್ಡೆ ಇಟ್ಟಿರುವುದು   

ಶ್ರೀನಿವಾಸಪುರ: ಸೌತೆಕಾಯಿ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ ನೂರಾರು ಎಕರೆಗಳಲ್ಲಿ ಸೌತೆ ಕಾಯಿ ಬೆಲೆಯಲಾಗಿದೆ. ಟೊಮೆಟೊ ಬೆಳೆ ಮುಗಿದ ಮೇಲೆ, ಅದೆ ಆಧಾರದ ಕಡ್ಡಿಗಳಿಗೆ ಸೌತೆ ಬಳ್ಳಿ ಹಬ್ಬಿಸಿ ಬೆಳೆಯುವುದು ಇಲ್ಲಿನ ರೈತರ ಪರಿಪಾಠ. ಈ ಬಾರಿ ಉತ್ತಮ ಫಸಲು ಕಾಣಿಸಿಕೊಂಡಿದೆ. ಆದರೆ ಬೆಲೆ ಕುಸಿತ ಬೆಳೆಗಾರ ನಿದ್ದೆಗೆಡಿಸಿದೆ.

ಒಂದು ವಾರದ ಹಿಂದೆ ಒಂದು ಸೌತೆ ಕಾಯಿ ಬೆಲೆ ₹10 ರಿಂದ ₹15 ಇತ್ತು. ಈಗ ಸಂತೆ ಹಾಗೂ ಮಾರುಕಟ್ಟೆಯಲ್ಲಿ 4–5 ಕಾಯಿಗಳ ಉಡ್ಡೆಯೊಂದಕ್ಕೆ ₹10 ರಂತೆ ಮಾರಾಟ ಮಾಡಲಾಗುತ್ತಿದೆ.

‘ಸಗಟು ಮಾರುಕಟ್ಟೆಯಲ್ಲಿ ಒಂದು ಮೂಟೆ ಸೌತೆಕಾಯಿ ₹20 ರಂತೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಕಾಯಿ ಕಿತ್ತು ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಹೊರಡುತ್ತಿಲ್ಲ‘ ಎಂದು ಬೆಳೆಗಾರ ಮುನಿರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಮಳೆ ಸುರಿದ ಪರಿಣಾಮವಾಗಿ ಬಳ್ಳಿ ಹುಲುಸಾಗಿ ಬೆಳೆದು ಉತ್ತಮ ಫಸಲು ಬಂದಿದೆ. ಅಧಿಕ ಫಸಲು ಬೆಲೆ ಕುಸಿತಕ್ಕೆ ಕಾರಣವಾಗಿದೆ’ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ಮಾಂಸಹಾರಿಗಳು ಮಾಂಸದ ಊಟದೊಂದಿಗೆ ಸೌತೆ ಕಾಯಿ ಸವಿಯುತ್ತಾರೆ. ಈಗ ಕಾರ್ತಿಕ ಮಾಸವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಜನ ಮಾಂಸಹಾರ ಸೇವನೆ ಮಾಡುವುದಿಲ್ಲ. ಇದೂ ಸಹ ಈ ಉತ್ಪನ್ನಕ್ಕೆ ಬೇಡಿಕೆ ಕುಸಿಯಲು ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಸೌತೆ ಕಾಯಿ ಮಾತ್ರವಲ್ಲದೆ ಹೂಕೋಸು, ಎಲೆ ಕೋಸು ಹಾಗೂ ಮೂಲಂಗಿ ಬೆಲೆಯೂ ಇಳಿದುಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.