ADVERTISEMENT

ಶಿಲ್ಪಕಲೆಯಲ್ಲಿ ಸಂಸ್ಕೃತಿಯ ಅಸ್ಮಿತೆ: ಕವಿ ಶರಣಪ್ಪ ಗಬ್ಬೂರ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 15:21 IST
Last Updated 28 ಏಪ್ರಿಲ್ 2021, 15:21 IST
ಜಿಲ್ಲಾ ಯುವ ಬರಹಗಾರರ ಒಕ್ಕೂಟವು ಕೋಲಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶಿಲ್ಪಿ ಸೋಮಾಚಾರಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಯುವ ಬರಹಗಾರರ ಒಕ್ಕೂಟವು ಕೋಲಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶಿಲ್ಪಿ ಸೋಮಾಚಾರಿ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಭಾರತೀಯ ಶಿಲ್ಪಕಲೆಯಲ್ಲಿ ಸಂಸ್ಕೃತಿಯ ಅಸ್ಮಿತೆ ಅಡಗಿದೆ. ಈ ಶಿಲ್ಪಕಲೆ ಪದ್ಧತಿಯನ್ನು ಪ್ರೋತ್ಸಾಹಿಸಬೇಕು’ ಎಂದು ಕವಿ ಶರಣಪ್ಪ ಗಬ್ಬೂರ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಯುವ ಬರಹಗಾರರ ಒಕ್ಕೂಟವು ಇಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತಾನಾಡಿ, ‘ಶಿಲ್ಪಕಲೆಯು ಇಂದು ಯಾಂತ್ರೀಕೃತ ಬದುಕಿಗೆ ಸಿಲುಕಿ ನಶಿಸಿ ಹೋಗುವ ಸ್ಥಿತಿಗೆ ತಲುಪಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಿಲ್ಪಕಲೆ ಉಳಿಸಿ ಬೆಳೆಸಲು ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಶಿಲ್ಪಕಲಾಕಾರರನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಶಿಲ್ಪಕಲಾಕಾರರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಮತ್ತು ಶಿಲ್ಪಕಲಾ ಶಾಲೆಗಳನ್ನು ಸ್ಥಾಪಿಸಬೇಕು. ಆ ಶಾಲೆಗಳಿಗೆ ನುರಿತ ಶಿಲ್ಪಾಚಾರ್ಯರನ್ನು ನೇಮಿಸಬೇಕು. ಮುಂದಿನ ತಲೆಮಾರಿಗೂ ಶಿಲ್ಪಕಲೆ ಪರಂಪರೆ ಉಳಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದ ವಿಭಿನ್ನ ಸಂಸ್ಕೃತಿ ಮತ್ತು ಸವಾಲುಗಳ ನಡುವೆಯೂ ಹಲವು ಕಿರಿಯ ಹಿರಿಯ ಶಿಲ್ಪಿಗಳು ಪಾಶ್ಚಾತ್ಯ ಪ್ರಭಾವ ಅರಗಿಸಿಕೊಂಡು ಸ್ವಂತಿಕೆ ಉಳಿಸಿಕೊಂಡಿದ್ದಾರೆ. ಶಿಲ್ಪಿಗಳು ರಾಷ್ಟ್ರ ಮಟ್ಟದಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಪಡೆದುಕೊಂಡಿದ್ದಾರೆ’ ಎಂದು ಉಪನ್ಯಾಸಕ ಅನೀಫ್‌ ಸಾಬ್ ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಲ್ಪಿ ಸೋಮಾಚಾರಿ, ‘ಸಾಂಪ್ರದಾಯಿಕ ಶಿಲ್ಪಕಲಾ ಕ್ಷೇತ್ರವನ್ನು ವೃತ್ತಿ ಪ್ರವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಮುಂದುವರಿಯುವವರು ಅಪರೂಪ. ಆದರೆ, ಇದೇ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಶಿಲ್ಪಗಳನ್ನು ರಚಿಸುತ್ತಾ ಶಿಲ್ಪಿಗಳು ಸಾಗುತ್ತಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ’ ಎಂದು ಹೇಳಿದರು.

ಶಿಕ್ಷಕರಾದ ಜನಾರ್ದನ್, ವೇಣು, ಜಿಲ್ಲಾ ಸಿರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ ಸುಬ್ಬರಾಮಯ್ಯ, ಶಿಕ್ಷಕ ವೇಣು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.