ಬಂಗಾರಪೇಟೆ: ಗುಟ್ಟಹಳ್ಳಿ ಗ್ರಾಮದ ವಕೀಲ ಎನ್.ನಾರಾಯಣಪ್ಪ ಅವರು ಪುರಸಭೆ ಸದಸ್ಯ ವೈ.ಸುನೀಲ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಆದರೂ ಪೊಲೀಸರು ಅವರನ್ನು ದಸ್ತಗಿರಿ ಮಾಡದೆ, ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ದೂರಿದ್ದಾರೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾನ ವಯಸ್ಕರ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ಮಾತನಾಡಿದ ಅವರು, ವೈ.ಸುನೀಲ್ ಕುಮಾರ್ ಅವರು 2012 ರಂದು ಎಲ್ಎಲ್‌ಬಿ ಮುಗಿದಿದ್ದು, ಅದೇ ವರ್ಷ ಬೆಂಗಳೂರು ಬಾರ್ ಕೌನ್ಸಿಲ್‌ನಲ್ಲಿ ನೊಂದಣಿಯಾಗಿ ವಕೀಲ ವೃತ್ತಿ ಆರಂಭಿಸಿದ್ದಾರೆ. ನಂತರ 2019ರಲ್ಲಿ ಪುರಸಭಾ ಸದಸ್ಯನಾಗಿ ಆಯ್ಕೆಗೊಂಡ ನಂತರ ತಾತ್ಕಾಲಿಕವಾಗಿ ವಕೀಲ ವೃತ್ತಿ ಮಾಡುತ್ತಿರಲಿಲ್ಲ.
ಸೆ.13ರಂದು ಸುನೀಲ್ ಕುಮಾರ್ ಹಾಗೂ ಎನ್.ನಾರಾಯಣಪ್ಪ ಅವರ ನಡುವೆ ಜಗಳವಾಗಿದ್ದು, ದೂರು ಪ್ರತಿ ದೂರು ದಾಖಲಾಗಿದೆ. ಇದರಲ್ಲಿ ಜಾರಿನಿಂದನೆ ಸಹ ಆಗಿದೆ. ಹಾಗಾಗಿ ತಕ್ಷಣ ಎನ್.ನಾರಾಯಣಪ್ಪ ಅವರನ್ನು ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪುರಸಭೆ ಸದಸ್ಯ ವೈ.ಸುನೀಲ್ ಕುಮಾರ್ ಮಾತನಾಡಿ, ‘ಬಂಗಾರಪೇಟೆಯ ವಕೀಲರ ಸಂಘದಿಂದ ನನ್ನನ್ನು ಅಮಾನತು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ವಕೀಲ ಎನ್.ನಾರಾಯಣಪ್ಪ ಮತ್ತು ನನ್ನ ಮಧ್ಯೆ ವಯಕ್ತಿಕ ಜಮೀನು ವ್ಯಾಜ್ಯವಿದೆ’ ಎಂದರು.
ವೈ.ಸುನೀಲ್ ಕುಮಾರ್ ಮೇಲೆ ಹಲ್ಲೆ ಮಾಡಿರುವ ಎನ್.ನಾರಾಯಣಪ್ಪ ಅವರನ್ನು ಬಂಧಿಸಲು ಉಪ ತಹಶೀಲ್ದಾರ್ ಗಾಯಿತ್ರಿ ಹಾಗೂ ಪೊಲೀಸ್ ನಿರೀಕ್ಷಕ ದಯಾನಂದ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕೆಆರ್‌ಎಸ್ ಪಕ್ಷದ ಚಿಕ್ಕನಾರಾಯಣ, ಭೀಮ್ ಪ್ರಜಾ ಸಂಘದ ಅಧ್ಯಕ್ಷ ಸಕ್ಕನಹಳ್ಳಿ ಮುನಿರಾಜು, ಗಂಗಮ್ಮನಪಾಳ್ಯ ಪ್ರಭಾವತಿ, ಕೀಲುಕೊಪ್ಪ ಶ್ರೀನಿವಾಸ್, ಭೀಮನ ಬೆಳಕು ಮುನಿರಾಜು, ಅರವಿಂದ್‌ಮಾರಾ, ಕೆರೆಕೋಡಿ ಮುನಿವೆಂಕಟಪ್ಪ, ಪ್ರಭಾಕರ್ ರಾವ್, ಮರಗಲ್ ಲಕ್‌ಮ್ಮ, ಗಜೇಂದ್ರರಾವ್, ಸತೀಶ್‌ಕುಮಾರ್, ಗಾಜಗ ಆಂಜಿ, ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.