ADVERTISEMENT

ಆರೋಗ್ಯ ಇಲಾಖೆಯಲ್ಲಿ ಹಗಲು ದರೋಡೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 15:53 IST
Last Updated 15 ಸೆಪ್ಟೆಂಬರ್ 2020, 15:53 IST
ಕೋಲಾರದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿದರು.   

ಕೋಲಾರ: ‘ಆರೋಗ್ಯ ಇಲಾಖೆಯಲ್ಲಿ ಆಲಿ ಬಾಬಾ ಮತ್ತು 40 ದೊಂಗಲು (ಕಳ್ಳರು) ಇದ್ದಾರೆ. ಇಲಾಖೆಯಲ್ಲಿ ನೇಮಕಾತಿ, ವರ್ಗಾವಣೆ ಸೇರಿದಂತೆ ಅಂಗವಿಕಲರ ಪ್ರಮಾಣಪತ್ರದಲ್ಲೂ ಹಗಲು ದರೋಡೆ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಗಂಭೀರ ಆರೋಪ ಮಾಡಿದರು.

ಇಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲಾಖೆ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಆರೋಗ್ಯ ಇಲಾಖೆಯಲ್ಲಿ ಸಚಿವರು, ಸಂಸದರು, ಶಾಸಕರು, ಜಿ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಮಾತಿಗೆ ಬೆಲೆ ಇಲ್ಲವಾಗಿದೆ. ಅಧಿಕಾರಿಗಳು ತಮಗೆ ಬೇಕಾದವರ ಜತೆ ವ್ಯವಹಾರ ಕುದುರಿಸಿಕೊಂಡು ನೇಮಕಾತಿ ನಡೆಸುತ್ತಾರೆ. ವರ್ಗಾವಣೆಯು ಹಣ ಮಾಡುವ ದಂಧೆಯಾಗಿದೆ. ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ಏಜೆಂಟರನ್ನು ಕೂರಿಸಿ ವ್ಯವಹಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ಅನುಮತಿ ನೀಡಿದೆ. ಏಜೆನ್ಸಿಗಳು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಏಜೆನ್ಸಿಗಳನ್ನು ದೂರವಿಟ್ಟು ನೇಮಕಾತಿ ನಡೆಸಿದ್ದಾರೆ. 3 ತಿಂಗಳಲ್ಲಿ ಸುಮಾರು 80 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರತಿ ಅಭ್ಯರ್ಥಿಯಿಂದ ₹ 3 ಲಕ್ಷದವರೆಗೆ ಲಂಚ ಪಡೆಯಲಾಗಿದೆ’ ಎಂದು ಕಿಡಿಕಾರಿದರು.

ತಂಡ ರಚನೆ: ಅಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿ.ಪಂ (ಪ್ರಭಾರ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ, ‘ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದ್ದರೆ ಇನ್ನು ಮುಂದೆ ಡಿಎಚ್‍ಓ ಅವರಿಗೆ ನೇಮಕಾತಿಯ ಅಧಿಕಾರ ಕೊಡುವುದು ಬೇಡ. ನೇಮಕಾತಿಗೆ ಇಲಾಖೆಯ 5 ಮಂದಿ ಅಧಿಕಾರಿಗಳ ವಿಶೇಷ ತಂಡ ರಚಿಸೋಣ’ ಎಂದು ತಿಳಿಸಿದರು.

‘ನೇಮಕಾತಿಯಲ್ಲಿ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳಿ. ಅದು ಬಿಟ್ಟು ತಪ್ಪು ಸಮರ್ಥಿಸಿಕೊಳ್ಳಲು ವಾದ ಮಾಡಬೇಡಿ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ವ್ಯಾಪಕ ಭ್ರಷ್ಟಾಚಾರ: ‘ಕೆ.ಸಿ ವ್ಯಾಲಿ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುತ್ತಿವೆ. ಅಕ್ರಮದ ರೂವಾರಿಯಾದ ಕೆ.ಸಿ ವ್ಯಾಲಿ ಯೋಜನೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೃಷ್ಣ ಅವರನ್ನು ತಕ್ಷಣವೇ ಇಲ್ಲಿಂದ ಎತ್ತಂಗಡಿ ಮಾಡಬೇಕು’ ಎಂದು ಅಧ್ಯಕ್ಷರು ಆಗ್ರಹಿಸಿದರು.

‘ಯಾವುದೋ ರಾಜಕಾರಣಿಯ ಓಲೈಕೆಗಾಗಿ ಒಂದು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕೆಟ್ಟ ಪ್ರಯತ್ನ ನಡೆದಿದೆ. ಇದು ಸರಿಯಲ್ಲ. ಅಧಿಕಾರಿಗಳು ಯಾರದೋ ಮರ್ಜಿಗೆ ಮಣಿದು ಚೆಕ್‌ಡ್ಯಾಂಗಳ ಎತ್ತರ ತಗ್ಗಿಸಿ ನೀರು ಬಿಡುವುದು ಸರಿಯಲ್ಲ. 2ನೇ ಹಂತದ ಕೆರೆಗಳ ಪಟ್ಟಿ ಸಿದ್ಧಪಡಿಸುವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪಟ್ಟಿ ಮಾಡಬೇಕು’ ಎಂದು ಸೂಚಿಸಿದರು.

‘ಕೋಲಾರ ತಾಲ್ಲೂಕಿನ ಎಸ್.ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿಲ್ಲ. ನನಗೂ ಆಹ್ವಾನ ನೀಡಿಲ್ಲ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ನಡೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ‘ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಿಲ್ಲ. ಬದಲಿಗೆ ಅದು ರಾಜಕೀಯ ಪಕ್ಷವೊಂದರ ಖಾಸಗಿ ಕಾರ್ಯಕ್ರಮ’ ಎಂದು ಸ್ಪಷ್ಟಪಡಿಸಿದರು. ಇದರಿಂದ ಮತ್ತಷ್ಟು ಕೆರಳಿದ ಅಧ್ಯಕ್ಷರು, ‘ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು ಏಕೆ ಹೋಗಿದ್ದಿರಿ?’ ಎಂದು ಪ್ರಶ್ನಿಸಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್
ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.