
ಕೋಲಾರ: ಅಂತರಜಾತಿ ಮದುವೆಗಳಿಗೂ ಮುನ್ನ ಉಪಜಾತಿಗಳಲ್ಲಿ ವಿವಾಹಗಳಾಗಬೇಕು. ಪ್ರೇಮ ವಿವಾಹಗಳ ಜೊತೆಗೆ ಪೋಷಕರೇ ಅಂತರ್ಜಾತಿ ವಿವಾಹ ಆಯೋಜಿಸುವ ಹಂತಕ್ಕೆ ನಮ್ಮ ಸಮಾಜ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆಶಿಸಿದರು.
‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಅಂಗವಾಗಿ ಅರಿವು ಭಾರತ ಸಂಸ್ಥೆಯು ತಾಲ್ಲೂಕಿನ ನಾಗನಾಳ ಗ್ರಾಮದ ವಿ.ಮಂಜುನಾಥ್ ನಾಗನಾಳ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಕಾನೂನಿನಿಂದ ಎಲ್ಲಾ ಬದಲಾವಣೆಗಳು ಸಾಧ್ಯವಿಲ್ಲ. ಸಾಮಾಜಿಕ ಪರಿವರ್ತನೆಗೆ ನಾಗರಿಕರು ಪ್ರಯತ್ನಿಸಬೇಕು, ಮಾನವೀಯ ಮೌಲ್ಯಗಳನ್ನು ಹರಡಬೇಕು ಎಂದು ಹೇಳಿದರು.
ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ಗಟ್ಟಿ ಮನಸ್ಸುಗಳನ್ನೂ ಮೃದುಗೊಳಿಸಬಹುದಾಗಿದೆ. ಹಲವಾರು ಜಟಿಲ ಸಮಸ್ಯೆಗಳನ್ನೂ ಸರಿಯಾದ ಮಾರ್ಗದಿಂದ ಸರಿಪಡಿಸಬಹುದಾಗಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಮಾತನಾಡಿ, ಅರಿವು ಕಾರ್ಯಕ್ರಮಗಳ ನಿರಂತರ ಪ್ರಯತ್ನಕ್ಕೆ ಬೆಂಬಲ ಸೂಚಿಸಿ ಪ್ರತಿ ಗ್ರಾಮದಲ್ಲೂ ಸಹಭೋಜನ ಏರ್ಪಡಿಸಲು ಸೂಚಿಸಿದರು. ದೂರದವರೂ ಹತ್ತಿರವಾಗಿ ಸ್ನೇಹ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ತಿಳಿಸಿದರು.
ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಡಿ.ದೇವರಾಜ್ ಮಾತನಾಡಿ, ‘ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅರಿವು ಸಹಭೋಜನ ಕಾರ್ಯಕ್ರಮದಿಂದ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ‘ಯುವಜನರನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಂಡರೆ ಅಸ್ಪೃಶ್ಯತೆ ನಿರ್ಮೂಲನೆ ಸಲೀಸಾಗುತ್ತದೆ. ಹಳ್ಳಿ ಕೇಂದ್ರಿತ ಕಾರ್ಯಕ್ರಮಗಳು ಬೇರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ’ ಎಂದು ಸಲಹೆ ನೀಡಿದರು.
ಪ್ರಜಾ ಪರಿವರ್ತನಾ ವೇದಿಕೆಯ ಬಿ.ಗೋಪಾಲ್ ದಿಕ್ಸೂಚಿ ಭಾಷಣ ಮಾಡಿ, ‘ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಲು ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವುದು ಮುಖ್ಯ. ಬುದ್ಧರ ಕಾಲದಲ್ಲಿ ಶುರುವಾದ ಸಮಭಾವ ಚಿಂತನೆಯನ್ನು ನಾವೆಲ್ಲ ಕೂಡಿ ಬಲಪಡಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಳ ಸೋಮಣ್ಣ ಮಾತನಾಡಿ, ಶಿಕ್ಷಣ ಮತ್ತು ಆಧುನಿಕತೆಯಿಂದ ಹಳ್ಳಿಗಳು ಬದಲಾಗಿದ್ದರೂ ಕೆಲ ಮೂಢನಂಬಿಕೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಡಗೂರು ನಾಗರಾಜ್ ಮಾತನಾಡಿ, ‘ಹೋರಾಟಗಾರರು ಎತ್ತಿದ ಅಸಮಾನತೆಯ ಪ್ರಶ್ನೆಗಳಿಗೆ ಉತ್ತರವಾಗಿ ನಾವೆಲ್ಲ ಸೇರಿ ಮಾಡಬಹುದಾದ ಹಲವು ಕೆಲಸಗಳಿವೆ. ದ್ವೇಷ ಈಗ ಕಡಿಮೆಯಾಗುತ್ತಿದೆ. ಪ್ರೀತಿಯಿಂದ ಹಳ್ಳಿಗಳಲ್ಲಿ ಉಳಿದಿರುವ ತಾರತಮ್ಯವನ್ನು ತಿದ್ದಬಹುದಾಗಿದೆ’ ಎಂದರು.
ಸಹಭೋಜನ ಏರ್ಪಡಿಸಿದ ನಾಗನಾಳ ಮಂಜುನಾಥ್ ದಂಪತಿಗೆ ಗ್ರಾಮರತ್ನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕುರಟಹಳ್ಳಿ ರಾಧಾಕೃಷ್ಣ, ಓಂಪ್ರಕಾಶ್, ವಾರಿಧಿ ಮಂಜುನಾಥರೆಡ್ಡಿ, ಸಿ.ಡಿ.ರಾಮಚಂದ್ರೇಗೌಡ, ಮಾಜಿ ಪ್ರಾಂಶುಪಾಲ ಕೃಷ್ಣ, ತಿಪ್ಪಸಂದ್ರ ಶ್ರೀನಿವಾಸ್, ಕುಟೀರ ಶಾಂತಮ್ಮ, ಈ ನೆಲ ಈ ಜಲ ವೆಂಕಟಾಚಲಪತಿ, ಕೂಟೇರಿ ನಂಜಾಮರಿ, ಜಿ.ಮಂಜುನಾಥ್, ನಾಗನಾಳ ರಮೇಶ್, ಶಂಕರ್, ಕೆ.ಎಚ್.ರಾಮಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರೊ.ತಿಲಕ್ ಕಾರ್ಯಕ್ರಮ ನಿರೂಪಿಸಿದರು.
ಶಾಂತಿಯುತ ಬದಲಾವಣೆಗೆ ಹಲವು ದಾರಿಗಳನ್ನು ಅರಿವು ಭಾರತ ಸಂಸ್ಥೆ ತೋರಿಸಿಕೊಟ್ಟಿದೆ. ಇಂಥ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಬೇಕು–ಎಂ.ಆರ್.ರವಿ, ಜಿಲ್ಲಾಧಿಕಾರಿ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.