ಶ್ರೀನಿವಾಸಪುರ: ಕೆರೆಗಳು ಸಾರ್ವಜನಿಕರ ಸ್ವತ್ತಾಗಿದ್ದು, ಎಲ್ಲರೂ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
‘ಈಗಾಗಲೇ ಕೆರೆಗಳ ಸರ್ವೆ ಕಾರ್ಯನಡೆಯುತ್ತಿದ್ದು, ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಒಂದು ವೇಳೆ ಕೆರೆ ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಇದ್ದರೆ ಗ್ರಾಮ ಪಂಚಾಯಿತಿ, ಪಿಡಿಒ ಹಾಗೂ ಇಲಾಖಾಧಿಕಾರಿ ಸಮ್ಮುಖದಲ್ಲಿ ಸರ್ವೇ ಮಾಡಬೇಕು. ಒತ್ತವರಿಯಾಗಿದ್ದರೆ ಅದಕ್ಕೆ ಟ್ರೆಂಚ್ ಹೊಡೆಸಬೇಕು’ ಎಂದರು.
‘ಕೆರೆಯಂಗಳದಲ್ಲಿ ಬೆಳೆ ಬೆಳೆದು ಫಸಲು ಪೂರ್ಣ ಬಂದಿದ್ದರೆ ಯಾವುದೇ ಕಾರಣಕ್ಕೂ ನಾಶ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.
ಪಟ್ಟಣದ ಅಮಾನಿಕೆರೆಯಂಗಳದಲ್ಲಿ ಸುಮಾರು 200 ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ‘ಕೆರೆಯು ಅಳತೆ ಆಗಿದೆಯೋ ಇಲ್ಲವೋ ನನಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ತಾಲ್ಲೂಕಿನ 50 ರಷ್ಟು ಕೆರೆಗಳು ಅಳತೆ ಆಗಬೇಕಾಗಿದೆ’ ಎಂದರು.
ತಾಲ್ಲೂಕಿನ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ, ಕೆಲವೊಂದು ಸಮಸ್ಯೆಗಳಿಗೆ ತಹಶೀಲ್ದಾರ್ ಜೊತೆ ಚರ್ಚೆ ಮಾಡಿದರು. ವಿವಿಧ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹಾರ ಮಾಡಿಕೊಡುವಂತೆ ನಿರ್ದೇಶನ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.