ADVERTISEMENT

ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಡಿಸಿ ತರಾಟೆ

ಲಾಕ್‌ಡೌನ್ ಆದೇಶ ಪಾಲನೆ ಕುರಿತು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:19 IST
Last Updated 29 ಮಾರ್ಚ್ 2020, 13:19 IST
ಲಾಕ್‌ಡೌನ್ ಪಾಲನೆ ಕುರಿತು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭಾನುವಾರ ಕೋಲಾರ ನಗರದಲ್ಲಿ ಸಂಚಾರ ಮಾಡಿದರು.
ಲಾಕ್‌ಡೌನ್ ಪಾಲನೆ ಕುರಿತು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭಾನುವಾರ ಕೋಲಾರ ನಗರದಲ್ಲಿ ಸಂಚಾರ ಮಾಡಿದರು.   

ಕೋಲಾರ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆಯೂ ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡಲು ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭಾನುವಾರ ತರಾಟೆಗೆ ತೆಗೆದುಕೊಂಡರು.

ಲಾಕ್‌ಡೌನನ್ ಆದೇಶ ಪಾಲನೆ ಕುರಿತು ಭಾನುವಾರ ನಗರ ಸಂಚಾರ ಮಾಡಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ‘ದಿನಸಿ ಅಂಗಡಿ, ತರಕಾರಿ ಅಂಗಡಿ ಸೇರಿದಂತೆ ಇನ್ನಿತರೆ ಅಂಗಡಿಗಳ ಬಳಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಸ್ತುಗಳ ಖರೀದಿಗೆ ಮುಂದಾಗಿದ್ದುದು ಕಂಡು ಬಂದಿತು.

ದಿನಸಿ ವಸ್ತುಗಳನ್ನು ಖರೀದಿ ಮಾಡಲು ಅಂಗಡಿಗಳ ಮುಂದೆ ಜಮಾಯಿಸಿರುವ ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸದೇ ಇದ್ದ ಹಿನ್ನೆಲೆಯಲ್ಲಿ ಸಂಬಂಧಿಸಿ ಅಂಗಡಿಗಳ ಬಳಿಗೆ ಹೋಗಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ರಾಜ್ಯದಲ್ಲಿ ಕೊರೊನ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಎಷ್ಟು ಜಾಗೃತಿ ಮೂಡಿಸಿದರು ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಿಲ್ಲವೇ ಎಂದು ಗರಂ ಆಗಿ ಇನ್ನೊಮ್ಮೆ ಮುಂದುವರೆದರೆ ಲೈಸನ್ಸ್ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ತರಕಾರಿ ಕೊಳ್ಳಲು ಮಕ್ಕಳನ್ನು ಜತೆಗೆ ಕರೆತಂದಿದ್ದವರಿಗೆ ಬುದ್ಧಿ ಹೇಳಿ, ಮಕ್ಕಳನ್ನು ಏಕೆ ಕರೆ ತಂದಿದ್ದೀರಿ. ಮಾಸ್ಕ್ ಸಹ ಧರಿಸಿಲ್ಲ, ಇನ್ನೆಷ್ಟು ಜಾಗೃತಿ ಮೂಡಿಸಬೇಕು ಎಂದು ಪ್ರಶ್ನಿಸಿ, ಕೂಡಲೇ ಮನೆಗಳಿಗೆ ತೆರಳುವಂತೆ ಸೂಚಿಸಿದರು.

ನಗರದ ಎಂಬಿ ರಸ್ತೆ, ಎಂಜಿ ರಸ್ತೆ, ಬಸ್‌ನಿಲ್ದಾಣ ವೃತ್ತದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಜನ ಗುಂಪು ಸೇರಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ಹೆಚ್ಚಾಗಿ ಸಂಚರಿಸಲು ಅವಕಾಶ ನೀಡದಂತೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.