ಕೋಲಾರ: ಬದುಕಿರುವ ವ್ಯಕ್ತಿಯ ಹೆಸರಲ್ಲಿ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿರುವ ವಿಚಾರ ನಗರದಲ್ಲಿ ಸೋಮವಾರ ನಡೆದ ಕೋಲಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.
ಲಕ್ಷ್ಮಿದೇವಮ್ಮ ಅಧ್ಯಕ್ಷತೆಯಲ್ಲಿ, ಶಾಸಕ ಕೊತ್ತೂರು ಮಂಜುನಾಥ್ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಸದಸ್ಯರು ವ್ಯಾಪಕ ಚರ್ಚೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದರು. ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಜೀವಂತ ವ್ಯಕ್ತಿಗೆ ಮರಣ ಪತ್ರ ವಿತರಿಸಿದ ಸುದ್ದಿ ಸಂಬಂಧ ಆರಂಭದಲ್ಲಿ ಮುರಳಿಗೌಡ ಪ್ರಸ್ತಾಪಿಸಿದರು.
ಮಧ್ಯೆ ಪ್ರವೇಶಿಸಿದ ಕೊತ್ತೂರು ಮಂಜುನಾಥ್, ‘ಬದುಕಿರುವ ವ್ಯಕ್ತಿಯ ಹೆಸರಿಗೆ ಮರಣ ಪ್ರಮಾಣ ಪತ್ರ ಮಾಡಿರುವುದು ಅಪರಾಧ, ಈ ಸಂಬಂಧ ಇಷ್ಟು ದಿನ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಒಬ್ಬರ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮತ್ತೊಂದು ಪ್ರಕರಣ ಮರುಕಳಿಸುತ್ತಿರಲಿಲ್ಲ. ಮೊದಲು ಕ್ರಮ ಕೈಗೊಳ್ಳಿ’ ಎಂದು ಪೌರಾಯುಕ್ತರಿಗೆ ಸೂಚಿಸಿದರು.
ಸದಸ್ಯರಾದ ಮಂಜುನಾಥ್, ಸೂರಿ ಮಾತನಾಡಿ, ‘ಕಚೇರಿಯ ಸಿಬ್ಬಂದಿಯ ಲಾಗಿನ್ ಐಡಿ ಬೇರೊಬ್ಬರ ಕೈಗೆ ಹೇಗೆ ಹೋಯಿತು? ಸಿಬ್ಬಂದಿ ಖಾಸಗಿ ವ್ಯಕ್ತಿಗೆ ಕೊಟ್ಟಿರುವುದರಿಂದಲೇ ಅನಾಹುತ ನಡೆದಿದೆ. ದೂರು ದಾಖಲಿಸಿ ಕೆಲಸದಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಸಭೆಯಲ್ಲಿ 60ಕ್ಕೂ ಹೆಚ್ಚು ವಿಷಯಗಳು ಕುರಿತು ಸುದೀರ್ಘ ಚರ್ಚೆ ನಡೆಸಿ ಅನುಮೋದಿಸಲಾಯಿತು.
ಕೊತ್ತೂರು ಮಂಜುನಾಥ್ ಮಾತನಾಡಿ, ‘ಬಿಟ್ಟು ಹೋಗಿರುವ ಯುಜಿಡಿ ಲೈನ್ ನಿರ್ಮಾಣಕ್ಕೆ ಈಗಾಗಲೇ ₹ 60 ಕೋಟಿಗೆ ಟೆಂಡರ್ ಆಗಿತ್ತು. ಇದರಲ್ಲಿ ವ್ಯತ್ಯಾಸವಾಗಿ ಕೆಲ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗಿದ್ದಾರೆ. ಈಗಾಗಲೇ ವಕೀಲರನ್ನು ನೇಮಕ ಮಾಡಿದ್ದು, ಆದಷ್ಟು ಬೇಗ ಇತ್ಯರ್ಥಪಡಿಸಿ ಯುಜಿಡಿ ಸಮಸ್ಯೆಗೆ ಅಂತ್ಯ ಕಾಣಿಸಲಾಗುವುದು’ ಎಂದರು.
ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ವಾಣಿಜ್ಯ ಮಳಿಗೆ ಸಂಬಂಧ ಬಾಡಿಗೆ ಬಾಕಿ ಇದೆ. ಈ ಕುರಿತು ಪುಸ್ತಕ ನಿರ್ವಹಣೆಯಾಗುತ್ತಿಲ್ಲ. ಸಿಬ್ಬಂದಿ ಕೇಳಿದರೆ ನಾಪತ್ತೆಯಾಗಿದೆ ಎಂಬುದಾಗಿ ಹೇಳಿದ್ದು, ಎಫ್‌ಐಆರ್ ದಾ ಖಲಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೊತ್ತೂರು ಮಂಜುನಾಥ್, ಪುಸ್ತಕಗಳು ಇರಲಿ; ಜಾಗಗಳೇ ಮಾಯವಾಗುತ್ತಿವೆ. ಇದಕ್ಕೇನು ಹೇಳಬೇಕು ಎಂದು ಪ್ರಶ್ನಿಸಿದರು.
ಪ್ರವೀಣಗೌಡ ಮಧ್ಯ ಪ್ರವೇಶಿಸಿ, ನಗರಸಭೆ ಆಸ್ತಿಗಳನ್ನು ಸರ್ವೇ ಮಾಡಿ ಗಡಿ ಗುರುತಿಸಿ ಕೊಡಲು ಈಗಾಗಲೇ ನಗರಸಭೆಯಿಂದ ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಈ ವಿಚಾರದಲ್ಲಿ ಆಸ್ತಿ ತೋರುತ್ತಿಲ್ಲ. ಶಾಸಕರು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸದಸ್ಯ ಪ್ರಸಾದ್ ಬಾಬು ಮಾತನಾಡಿ, ‘ನಗರ ಪ್ರದೇಶದಲ್ಲಿ ಅಗತ್ಯವಿರುವ ಕಡೆ ನಂದಿನಿ ಪಾರ್ಲರ್ ತೆರೆಯಲು ನಗರಸಭೆಯ ಸಹಕಾರ ಅಗತ್ಯವಿದ್ದು, ಇದಕ್ಕೆ ಸದಸ್ಯರೆಲ್ಲರೂ ಸಹಕರಿಸಬೇಕು’ ಎಂದಾಗ ಎಲ್ಲರೂ ಬೆಂಬಲ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಂಗೀತಾ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಫುಡ್ ಕೋರ್ಟ್; ಮಳಿಗೆಗೆ ನಿತ್ಯ ₹ 200
ಫುಡ್ ಕೋರ್ಟ್‌ನಲ್ಲಿ ತಿನಿಸು ಅಂಗಡಿಗಳಿಗೆ ಬಾಡಿಗೆ ನಿಗದಿಪಡಿಸುವ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂತು. ಒಮ್ಮತದಿಂದ ಸದಸ್ಯರು ದಿನಕ್ಕೆ ಮಳಿಗೆಯೊಂದಕ್ಕೆ ₹ 200 ದರ ನಿಗದಿಗೆ ಅನುಮೋದಿಸಿದರು. ಪೌರಾಯುಕ್ತ ನವೀನ್ ಚಂದ್ರ ‘ಒಟ್ಟು 27 ಮಳಿಗೆಗಳು ಇದ್ದು ಬೆಳಿಗ್ಗೆ ಸಂಜೆ ಊಟ ತಿಂಡಿ ಸ್ನ್ಯಾಕ್ಸ್ ಇಟ್ಟುಕೊಳ್ಳಬಹುದು. ಸ್ವಚ್ಛತೆ ಶುಚಿ ರುಚಿಗೆ ಆದ್ಯತೆ ನೀಡಬೇಕು. ದಿನವಾಹಿ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದ್ದು ದರ ನಿಗದಿ ಮಾಡಿ ಅನುಮೋದಿಸಬೇಕು’ ಎಂದು ಕೋರಿದರು. ಈಗಾಗಲೇ ನಗರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಮೊದಲು ಆ ಜಾಗದಲ್ಲಿ ತಿನಿಸು ಅಂಗಡಿ ಇಟ್ಟುಕೊಂಡವರಿಗೆ ಆದ್ಯತೆ ನೀಡಲಾಗುವುದು ಎಂದರು. ಕೊತ್ತೂರು ಮಂಜುನಾಥ್ ಮಾತನಾಡಿ ಬಾಡಿಗೆಗೆ ಪಡೆದವರು ಮತ್ತೊಬ್ಬರಿಗೆ ಹೆಚ್ಚುವರಿ ಬಾಡಿಗೆಗೆ ನೀಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸದಸ್ಯರಾದ ಪ್ರವೀಣಗೌಡ ರಾಕೇಶ್ ಮಾತನಾಡಿ ಈಗಾಗಲೇ ಅಂಗಡಿ ಕೊಡಿಸಿ ಎಂದು ಒತ್ತಡಗಳು ಬರುತ್ತಿವೆ. ಹಂಚಿಕೆ ವಿಚಾರ ಪಾರದರ್ಶಕವಾಗಿರಲಿ ಎಂದರು.
ರಸ್ತೆ ಅಗೆದಿದ್ದಕ್ಕೆ ಶುಲ್ಕ ಹೆಚ್ಚಳ ಬೇಡ
ನೀರು ಹಾಗೂ ಯುಜಿಡಿ ಸಂಪರ್ಕ ಪಡೆಯಲು ಮನೆಯವರು ರಸ್ತೆ ಅಗೆಯುವ ಸಂಬಂಧ ಅವರಿಂದ ಅಧಿಕ ಶುಲ್ಕ ವಸೂಲಿ ಮಾಡುವ ಕುರಿತು ಪೌರಾಯುಕ್ತ ನವೀನ್ ಚಂದ್ರ ಪ್ರಸ್ತಾಪಿಸಿದರು. ಸದಸ್ಯರಾದ ಪ್ರವೀಣಗೌಡ ಮುರಳಿಗೌಡ ರಾಕೇಶ್ ಮಂಜುನಾಥ್ ಮಾತನಾಡಿ ನಗರದಲ್ಲಿ ಸಾಕಷ್ಟು ಮಂದಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಮೊದಲು ಅದನ್ನು ವಸೂಲಿ ಮಾಡಿದರೆ ಆದಾಯ ವೃದ್ಧಿ ಆಗುತ್ತದೆ. ಹೆಚ್ಚುವರಿ ಶುಲ್ಕ ಪಾವತಿ ಮಾಡಲು ಹಿಂಜರಿಯುತ್ತಾರೆ. ಈಗಿರುವ ₹ 2500 ಸಾಕು ₹ 5 ಸಾವಿರಕ್ಕೆ ಹೆಚ್ಚಿಸುವುದು ಬೇಡ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.