ADVERTISEMENT

ಕೋಲಾರ: ಆಸ್ಪತ್ರೆಯಲ್ಲಿ 4 ಸೋಂಕಿತರ ಕೊನೆಯುಸಿರು

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:22 IST
Last Updated 6 ಆಗಸ್ಟ್ 2020, 15:22 IST
   

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಗುರುವಾರ 4 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಮುಳಬಾಗಿಲು ನಗರದ ಸೋಂಕಿತ ಮಹಿಳೆ ಮತ್ತು ಪುರುಷ, ಕೋಲಾರ ನಗರದ 41 ವರ್ಷದ ಮಹಿಳೆ ಹಾಗೂ ಬಂಗಾರಪೇಟೆ ತಾಲ್ಲೂಕಿನ ವಯೋವೃದ್ಧರೊಬ್ಬರು ಜಿಲ್ಲಾ ಕೇಂದ್ರದ ಆರ್‌.ಎಲ್‌ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ಇದರ ಬೆನ್ನಲ್ಲೇ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ 107 ಮಂದಿಗೆ ಸೋಂಕು ತಗುಲಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 791ಕ್ಕೆ ಹೆಚ್ಚಳವಾಗಿದೆ.

ADVERTISEMENT

ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ 4 ಮಂದಿಗೆ, ಸೋಂಕಿತರ ಸಂಪರ್ಕದಿಂದ 5 ಮಂದಿಗೆ, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಮತ್ತು ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ತಗುಲಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 5 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 4 ಮಂದಿಗೆ ಸೋಂಕು ಹರಡಿದೆ.

ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ ಇಬ್ಬರಿಗೆ, ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಮತ್ತು ಗರ್ಭಿಣಿಯೊಬ್ಬರಿಗೆ ಸೋಂಕು ಬಂದಿದೆ. ಮುಳಬಾಗಿಲು ಸೋಂಕಿತರ ಸಂಪರ್ಕದಿಂದ 7 ಮಂದಿಗೆ, ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಒಬ್ಬರಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿರುವ ಇಬ್ಬರಿಗೆ ಸೋಂಕು ತಗುಲಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 5 ಮಂದಿಗೆ, ತೀವ್ರ ಉಸಿರಾಟ ಸಮಸ್ಯೆಯಿರುವ ಒಬ್ಬರಿಗೆ ಮತ್ತು ಗರ್ಭಿಣಿಯೊಬ್ಬರಿಗೆ ಸೋಂಕು ಬಂದಿದೆ.

ಸೋಂಕಿನ ನಂಟು: ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 65 ಮಂದಿಗೆ ಸೋಂಕು ಹರಡಿದ್ದು, ಸೋಂಕಿತರ ಸಂಪರ್ಕವು ಅಪಾಯಕಾರಿಯಾಗಿ ಪರಿಣಮಿಸಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 37 ಮಂದಿಗೆ, ಸೋಂಕಿತರ ಸಂಪರ್ಕದಿಂದ 27 ಮಂದಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿರುವ ಒಬ್ಬರಿಗೆ ಸೋಂಕು ಬಂದಿದೆ.

ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.