ADVERTISEMENT

ಹಾಲು ಖರೀದಿ ದರ ಇಳಿಕೆ: 11ಕ್ಕೆ ಪ್ರತಿಭಟನೆ

ಕೋಚಿಮುಲ್‌ನಲ್ಲಿ ಆದಾಯ ಸೋರಿಕೆ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 14:06 IST
Last Updated 6 ಜನವರಿ 2022, 14:06 IST
ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ಹಾಲು ಖರೀದಿ ದರ ಇಳಿಕೆ ಮಾಡಿರುವ ಕ್ರಮ ಖಂಡಿಸಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಎದುರು ಜ.11ರಂದು ಬೃಹತ್ ಪ್ರತಿಭಟನೆ ಮಾಡುತ್ತೇವೆ’ ಎಂದು ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ನೊಂದ ಹಾಲು ಉತ್ಪಾದಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಅವಿಭಜಿತ ಕೋಲಾರ ಜಿಲ್ಲೆಯ ಹೈನುಗಾರರು, ಡೇರಿ ಅಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು ಪಾಲ್ಗೊಳ್ಳುತ್ತಾರೆ’ ಎಂದರು.

‘ಒಕ್ಕೂಟದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಾಲು ಖರೀದಿ ದರ ಲೀಟರ್‌ಗೆ ಕನಿಷ್ಠ ₹ 35 ನಿಗದಿಪಡಿಸಬೇಕು. ರಾಜ್ಯದೆಲ್ಲೆಡೆ ಏಕರೂಪ ಹಾಲಿನ ದರ ಇರಬೇಕು. 15 ಕಿ.ಮೀ ಒಳಗಿನ ಬಿಎಂಸಿಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಕೋಚಿಮುಲ್‌ನಲ್ಲಿ ಆದಾಯ ಸೋರಿಕೆಯಾಗುತ್ತಿದ್ದು, ಒಕ್ಕೂಟದಲ್ಲಿ ಸದಾ ನಷ್ಟ ತೋರಿಸಲಾಗುತ್ತಿದೆ. ಆದರೆ, ನಷ್ಟಕ್ಕೆ ರೈತರು ಕಾರಣರಲ್ಲ. ಪಶು ಆಹಾರದ ಬೆಲೆ ಕಡಿಮೆ ಮಾಡದೆ ಹಾಲಿನ ದರ ಇಳಿಸಿರುವುದು ಸರಿಯಲ್ಲ. ಒಕ್ಕೂಟದಿಂದ ರೈತರಿಗೆ ಲಾಭ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಹಾಲಿಗೆ ಸಹಾಯಧನ ನೀಡುತ್ತಿದೆ ಎಂದು ಹೇಳುತ್ತಾರೆ. ಆದರೆ, ಅದರಿಂದ ಪ್ರಯೋಜನವಿಲ್ಲ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಲಿ. ಅದನ್ನು ಗ್ರಾಹಕರಿಗೆ ನೀಡಲಿ. ಗ್ರಾಹಕರಿಗೆ ಸಬ್ಸಿಡಿ ನೀಡಿದರೆ ಹಾಲಿನ ಖರೀದಿ ಬೆಲೆ ಕಡಿಮೆಯಾಗುತ್ತದೆ. ಯೋಗ್ಯ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದರು.

ಬೇಸರದ ಸಂಗತಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣದ ಮಧ್ಯೆ ಪಂಜಾಬ್‌ನಲ್ಲಿ ಕಾದು ವಾಪಸ್‌ ಹೋಗಿರುವುದು ಬೇಸರದ ಸಂಗತಿ. ಆದರೆ, ಬಿಜೆಪಿ ತನ್ನ ವೈಫಲ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ರಾಜ್ಯದ ವಿರುದ್ಧ ಗುರುತರ ಆರೋಪ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ದೆಹಲಿ ಗಡಿಯಲ್ಲಿ ರೈತರ ಹೋರಾಟ ನಡೆಸಿದಾಗ ಬಿಜೆಪಿ ಮುಖಂಡರು ಖಲಿಸ್ತಾನಿಗಳ, ವಿದೇಶಿ ಉಗ್ರರ ಬೆಂಬಲವಿದೆ ಎಂದು ಹೇಳಿದ್ದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾವುದೇ ಕಾನೂನನ್ನು ಏಕಾಏಕಿ ಹೇರಬಾರದು. ಸಾರ್ವಜನಿಕ ಚರ್ಚೆಗೆ ಒಳಪಡಿಸಿ ತಜ್ಞರ ಅಭಿಪ್ರಾಯ ಪಡೆಯಬೇಕು. ವಿಧಾನಸಭೆ, ಲೋಕಸಭೆಯಲ್ಲಿ ಚರ್ಚಿಸಿ ಕಾನೂನು ಜಾರಿಗೊಳಿಸಬೇಕು. ಅದು ಬಿಟ್ಟು ಸುಗ್ರೀವಾಜ್ಞೆ ಮೂಲಕ ಕೃಷಿ ವಿರೋಧಿ ಕಾಯ್ದೆಗಳನ್ನು ರೈತರ ಮೇಲೆ ಹೇರಿದ್ದು ತಪ್ಪು’ ಎಂದು ತಿಳಿಸಿದರು.

ವಿನಾಯಿತಿ ನೀಡಬೇಕು: ‘ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ಮಾರ್ಗಸೂಚಿ ಜಾರಿ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಾರ್ಗಸೂಚಿಯಿಂದ ರೈತರಿಗೆ ವಿನಾಯಿತಿ ನೀಡಬೇಕು. ಹಣ್ಣು, ತರಕಾರಿ, ಹೂವು ಸರಬರಾಜು ಮಾಡುವ ರೈತರಿಗೆ ಅವಕಾಶ ನೀಡಬೇಕು. ಪೊಲೀಸರ ದಂದೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ ಮುಖಂಡರು ಮೇಕೆದಾಟು ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ನೈತಿಕತೆಯಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಏಕೆ ಯೋಜನೆ ಜಾರಿ ಮಾಡಲಿಲ್ಲ. ಕಾಂಗ್ರೆಸ್‌ನ ಪಾದಯಾತ್ರೆ ರಾಜಕೀಯ ಕಾರ್ಯಕ್ರಮವಾಗಿದ್ದು, ನಾವು ಬೆಂಬಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.