ADVERTISEMENT

ಹಾಲು ಖರೀದಿ ದರ ಕಡಿತ: ಕೋಚಿಮುಲ್‌ ಕಚೇರಿಗೆ ಮುತ್ತಿಗೆ, ಪ್ರತಿಭಟನೆ

ರೈತ ಸಂಘ ಸದಸ್ಯರ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:25 IST
Last Updated 28 ಜುಲೈ 2020, 14:25 IST
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಕೋಚಿಮುಲ್‌ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಕೋಚಿಮುಲ್‌ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.   

ಕೋಲಾರ: ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಕೋಚಿಮುಲ್‌ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

‘ಬರ ಪರಿಸ್ಥಿತಿ ನಡುವೆಯೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್‌–19 ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಚಿಮುಲ್‌ ಒಂದೂವರೆ ತಿಂಗಳಲ್ಲಿ 2 ಬಾರಿ ಹಾಲು ಖರೀದಿ ದರ ಕಡಿಮೆ ಮಾಡಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನೋದ್ಯಮವು ರೈತರ ಬೆನ್ನೆಲುಬು. ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಆದರೆ, ಒಕ್ಕೂಟದ ಆಡಳಿತ ಮಂಡಳಿಯು ನಷ್ಟದ ಸಬೂಬು ಹೇಳಿ ಹಾಲು ಖರೀದಿ ದರ ಕಡಿತಗೊಳಿಸಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,870 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಅವಳಿ ಜಿಲ್ಲೆಗಳಿಂದ ದಿನಕ್ಕೆ 10.30 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ’ ಎಂದು ಹೇಳಿದರು.

ಮೇವಿನ ಸಮಸ್ಯೆ: ‘ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಿದೆ. ಪಶು ಆಹಾರ ಹಾಗೂ ಮೇವಿನ ಬೆಲೆ ಗಗನಕ್ಕೇರಿದೆ. ಮೇವಿನ ಸಮಸ್ಯೆಯಿಂದಾಗಿ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿಲ್ಲ. ಘನ ಕೊಬ್ಬಿನ ಅಂಶ (ಎಸ್‌ಎನ್‌ಎಫ್‌) ಆಧರಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕೊಡುತ್ತಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಒಂದು ಲೀಟರ್ ಹಾಲು ಉತ್ಪಾದನೆಗೆ ಅಂದಾಜು ₹ 35 ವೆಚ್ಚವಾಗುತ್ತಿದೆ. ಆದರೆ, ಒಕ್ಕೂಟವು ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸಿ ರೈತರನ್ನು ಶೋಷಿಸುತ್ತಿದೆ. ಮತ್ತೊಂದೆಡೆ ಒಕ್ಕೂಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆದಾಯ ಸೋರಿಕೆಯಾಗುತ್ತಿದೆ’ ಎಂದು ಆರೋಪಿಸಿದರು.

‘ದೇಶದ ಸಂಪತ್ತು ಲೂಟಿ ಮಾಡುವ ಲೂಟಿಕೋರರನ್ನು ಸರ್ಕಾರಗಳು ರಕ್ಷಿಸುತ್ತವೆ. ಆದರೆ, ದೇಶಕ್ಕೆ ಆರ್ಥಿಕ ಸಂಪನ್ಮೂಲ ಕಲ್ಪಿಸುವ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಸರ್ಕಾರಗಳು ನೆರವಿಗೆ ಧಾವಿಸುವುದಿಲ್ಲ. ಸರ್ಕಾರಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ದೂರಿದರು.

ಆದೇಶ ಹಿಂಪಡೆಯಲಿ: ‘ದರ ಕಡಿತದ ಆದೇಶ ಹಿಂಪಡೆಯಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಮತ್ತು ಖರೀದಿಗೆ ಸಬ್ಸಿಡಿ ನೀಡಬೇಕು. ರಾಜ್ಯದೆಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲೂ ಹಾಲಿಗೆ ಏಕರೂಪ ಖರೀದಿ ದರ ನಿಗದಿಪಡಿಸಬೇಕು. ಹಾಲು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಖರೀದಿ ದರ ಹೆಚ್ಚಿಸಬೇಕು. ಒಕ್ಕೂಟದಲ್ಲಿನ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಹರಿಕುಮಾರ್, ಮಂಜುನಾಥ್, ಆಂಜಿನಪ್ಪ, ವೆಂಕಟೇಶ್. ತಿಮ್ಮಣ್ಣ, ನಾಗೇಶ್, ಕಾವ್ಯಾಂಜಲಿ, ಸುಪ್ರೀಂಚಲ, ಶಿವು, ನವೀನ್‌ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.