
ಬಂಗಾರಪೇಟೆ: ಬೆಂಗಳೂರು-ಚೆನ್ನೈ ರೈಲು ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತವೆ. ಆದರೆ, ತಾಲ್ಲೂಕಿನ ಕಾಮಸಮುದ್ರ ರೈಲ್ವೆ ನಿಲ್ದಾಣದ ಬಳಿ ಹೆಚ್ಚು ರೈಲು ಸಂಚಾರವೇ ಸುತ್ತಮುತ್ತಲಿನ ಜನತೆಗೆ ಸಂಕಷ್ಟವಾಗಿದೆ.
ದಿನದ 24 ಗಂಟೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ರೈಲುಗಳು ಕಾಮುದ್ರ ರೈಲ್ವೆ ಗೇಟ್ ಮೂಲಕ ಹಾದು ಹೋಗುತ್ತವೆ. ಇದರಿಂದ ಪ್ರತಿ 15-20 ನಿಮಿಷಕ್ಕೊಮ್ಮೆ ರೈಲ್ವೆ ಗೇಟ್ ಮುಚ್ಚಲಾಗುತ್ತದೆ. ಇದರಿಂದ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದೇ ಆಗಿರುವುದರಿಂದ ಜನ ಸಂಚಾರಕ್ಕೆ ಅಡ್ಡೆಯಾಗುತ್ತಿದೆ.
ಕಾಮಸಮುದ್ರ ಭಾಗದ ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ದೂರದ ಬೆಟ್ಟ. ಸ್ಥಳೀಯವಾಗಿ ಇಂದಿಗೂ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಯಾವುದೇ ತುರ್ತು ಸಂದರ್ಭ ಎದುರಾದರೂ ಬಂಗಾರಪೇಟೆ ಅಥವಾ ಕೆಜಿಎಫ್ ಆಸ್ಪತ್ರೆಗಳತ್ತ ಹೋಗಬೇಕು. ಆದರೆ, ಈ ಹಾದಿಯಲ್ಲಿರುವ ರೈಲ್ವೆ ಗೇಟ್ ಜನರಿಗೆ ಸಂಕಷ್ಟವೊಡ್ಡುವಂತಿದೆ.
ಅಪಘಾತ ಅಥವಾ ಹೆರಿಗೆ ನೋವಿನಿಂದ ಬಳಲುತ್ತಿದ್ದವರನ್ನು ಕರೆದೊಯ್ಯುವಾಗ ರೈಲ್ವೆ ಗೇಟ್ ಬಿದ್ದರೆ ಎಲ್ಲವೂ ಸ್ಥಗಿತಗೊಂಡಂತೆ. ಆಂಬುಲೆನ್ಸ್ ಸೈರನ್ ಶಬ್ದ ಎಷ್ಟೇ ಜೋರಾಗಿದ್ದರೂ, ಹಳಿಯ ಮೇಲೆ ವೇಗವಾಗಿ ಬರುವ ರೈಲುಗಳ ಮುಂದೆ ಆಂಬುಲೆನ್ಸ್ ಅಸಹಾಯಕವಾಗಿ ನಿಲ್ಲಲೇಬೇಕು. ಜೊತೆಗೆ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ, ಮಾರುಕಟ್ಟೆಗೆ ತರಕಾರಿ ಸಾಗಿಸುವ ರೈತರಿಗೆ ಎಲ್ಲರಿಗೂ ತೊಂದರೆಯಾಗುತ್ತದೆ. ಹಾಗಾಗಿ ಕಾಮಸಮುದ್ರ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಎಂದು ಮೂರು ದಶಕಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಬದಲಾದರೂ ಕಾಮಸಮುದ್ರದ ಜನರ ಹಣೆಬರಹ ಮಾತ್ರ ಬದಲಾಗಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.
ಚುನಾವಣೆ ಬಂದಾಗ ಜನಪ್ರತಿನಿಧಿಗಳು ಬಂದು ಭರವಸೆ ನೀಡುತ್ತಾರೆ. ಆದರೆ ಚುನಾವಣೆ ಮುಗಿದ ಮೇಲೆ ರೈಲ್ವೆ ಗೇಟ್ ಸಮಸ್ಯೆ ಕಾಣುವುದೇ ಇಲ್ಲ. ರೈಲ್ವೆ ಇಲಾಖೆಯು ಈ ಮಾರ್ಗವನ್ನು ಹೈ – ಸ್ಪೀಡ್ ಮಾಡಲು ಹೊರಟಿದೆ. ಆದರೆ ಜನರ ಸಂಕಷ್ಟಕ್ಕೆ ಮಾತ್ರ ಸ್ಪಂದಿಸುತ್ತಿಲ್ಲ. ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯದ ಕೊರತೆಯೋ ಅಥವಾ ರಾಜಕೀಯ ಇಚ್ಛಾಶಕ್ತಿ ಕೊರತೆಯೋ ಒಟ್ಟಿನಲ್ಲಿ ಜನರು ಸಂಕಷ್ಟ ಎದುರಿಸುವಂತಾಗಿದೆ.
ಈಗಲಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಬೆಂಗಳೂರು-ಚೆನ್ನೈ ಹೈ-ಸ್ಪೀಡ್ ಕಾರಿಡಾರ್‌ಗೆ ನೀಡುವ ಆದ್ಯತೆಯನ್ನು ಸ್ಥಳೀಯರ ಸಂಚಾರ ವ್ಯವಸ್ಥೆಗೂ ನೀಡಬೇಕು. ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
---
ಕಾಮಸಮುದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣಜ್ಜೆ ಮಂಜೂರಾತಿಯಾಗಿದ್ದು ಶೀಘ್ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು
-ಮೆಹಬೂಬ್ ಪಾಷಾ ಎಡಿಎನ್ ಬಂಗಾರಪೇಟೆ ವಿಭಾಗ ರೈಲ್ವೆ ಇಲಾಖೆ
ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ ಎನ್ನುತ್ತಾರೆ. ಆದರೆ ಕಾಮಸಮುದ್ರದ ವಿದ್ಯಾರ್ಥಿಗಳ ಭವಿಷ್ಯ ರೈಲ್ವೆ ಗೇಟ್‌ನ ಕೆಂಪು ಸಿಗ್ನಲ್‌ನಲ್ಲಿ ಸಿಲುಕಿ ನಲುಗುತ್ತಿದೆ.
-ದಿಶಾನ್ ರಾವ್ ಕೆ.ಎಸ್. ವಿದ್ಯಾರ್ಥಿ
‘ನಾವು ಬೆಳೆದ ಬೆಳೆ ರಸ್ತೆಯಲ್ಲೇ ಬಾಡಿ ಹೋಗುತ್ತಿದೆ. ರೈಲುಗಳು ನಿಲ್ಲದೆ ಸಾಗುತ್ತವೆ. ಆದರೆ ನಮ್ಮ ಬದುಕು ಮಾತ್ರ ಈ ರೈಲ್ವೆ ಗೇಟ್ ಬಳಿಯೇ ನಿಂತು ಹೋಗಿದೆ’.
-ಶಂಕರೇಗೌಡ ತೊಪ್ಪನಹಳ್ಳಿ ರೈತ
ಬೆಂಗಳೂರು-ಚೆನ್ನೈ ರೈಲು ಮಾರ್ಗ ಅಭಿವೃದ್ಧಿಯಾಗುತ್ತಿರುವುದು ಸಂತೋಷ. ಆದರೆ ನಮ್ಮ ಗ್ರಾಮದ ಜನರ ಸಂಚಾರದ ಹಕ್ಕು ಕಸಿದುಕೊಂಡು ಮಾಡುವ ಅಭಿವೃದ್ಧಿ ನಮಗೆ ಬೇಕಿಲ್ಲ. ತಕ್ಷಣ ಮೇಲ್ಸೇತುವೆ ನಿರ್ಮಾಣವಾಗಬೇಕು.
-ಧ್ರುವ ಕುಮಾರ್ ಕಾಮಸಮುದ್ರ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.