ಮುಳಬಾಗಿಲು: ನರೇಗಾ ಅಡಿಯಲ್ಲಿ ಜಲಸಂಜೀವಿನಿ 2.0 ಯೋಜನೆಯ ಪ್ರಾಯೋಗಿಕ ಅನುಷ್ಟಾನಕ್ಕಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಎಂಟು ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ತಾಲ್ಲೂಕಿನಲ್ಲಿ ದೇವರಾಯಸಮುದ್ರ ಸ್ಥಾನ ಪಡೆದಿದೆ ಎಂದು ರಾಜ್ಯ ತೋಟಗಾರಿಕಾ ಜಂಟಿ ನಿರ್ದೇಶಕ ಶೈಲ ಬಿ.ದಿಡ್ಡಿಮನಿ ಹೇಳಿದರು.
ತಾಲ್ಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಅವರು ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ಜಲಮೂಲಗಳಾದ ಕೆರೆ, ಕಲ್ಯಾಣಿ, ರಾಜಕಾಲುವೆ, ಕಲ್ಲುತಡೆ, ಚೆಕ್ ಡ್ಯಾಮ್, ಗೋಕಟ್ಟೆ, ನಾಲಾ ಬದು, ಗೋಮಾಳ ಅಭಿವೃದ್ಧಿ, ಕೃಷಿ ಹೊಂಡ, ಕೃಷಿ ಅರಣ್ಯೀಕರಣ, ತೋಟಗಾರಿಕೆ , ರೇಷ್ಮೆ ಮತ್ತಿತರ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಜಲಸಂಜೀವಿನಿ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಇದೆ. ಪಂಚಾಯಿತಿ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು. ಅಂತರ್ಜಲ ಹೆಚ್ಚಲು ವೈಜ್ಞಾನಿಕ ಯೋಜನೆ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ರಾಜ್ಯ ತಾಂತ್ರಿಕ ಸಂಯೋಜಕ ಬಿ.ಡಿ. ಆದರ್ಶ್, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸರ್ವೇಶ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ರವಿಚಂದ್ರ, ಪಿಡಿಒ ರಮೇಶ್, ಎಫ್ ಇಎಸ್ ಸಂಸ್ಥೆಯ ಲೋಕೇಶ್, ನರೇಗಾ ತಾಂತ್ರಿಕ ಸಂಯೋಜಕ ಸುಬ್ರಮಣಿ , ಇಂಜಿನಿಯರ್ ಸುಬ್ರಮಣ್ಯಾಚಾರಿ, ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕ ತೇಜಸ್ವಿನಿ, ಮುರಳಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.