
ಮುಳಬಾಗಿಲು: ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಗುರುವಾರ ತಾಲ್ಲೂಕಿನ ಹಲವು ಡಾಬಾಗಳ ಮೇಲೆ ದಾಳಿ ನಡೆಸಿ ಅಸುರಕ್ಷಿತ ಆಹಾರ ಸಲಕರಣೆಗಳನ್ನು ವಶಕ್ಕೆ ಪಡೆದು ಹಲವು ಡಾಬಾಗಳಿಗೆ ದಂಡ ವಿಧಿಸಿದೆ. ಜೊತೆಗೆ ಇನ್ನೂ ಕೆಲವು ಡಾಬಾಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ರಾಕೇಶ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಗುಣ ಮತ್ತಿತರರ ತಂಡವು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಡಾಬಾಗಳ ಮೇಲೆ ದಾಳಿ ನಡೆಸಿದೆ. ಡಾಬಾಗಳಲ್ಲಿ ಕಾನೂನಿನ ವಿರುದ್ಧ ಬಳಸುತ್ತಿದ್ದ ಟೇಸ್ಟಿಂಗ್ ಪೌಡರ್, ಬಣ್ಣದ ರಾಸಾಯನಿಕರಗಳು ಮತ್ತಿತರ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಡಾ.ಸುಗುಣ ಹಾಗೂ ರಾಕೇಶ್ ಮಾತನಾಡಿ, ಡಾಬಾಗಳಲ್ಲಿ ಅಕ್ರಮವಾಗಿ ಬಳಕೆಗೆ ಬಾರದ ಸಲಕರಣೆಗಳನ್ನು ಬಳಸುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಕಾನೂನು ಬಾಹಿರ. ಹಾಗಾಗಿ ಎಲ್ಲಾ ಸಲಕರಣೆಗಳನ್ನು ವಶಕ್ಕೆ ಪಡೆದು, ಎಲ್ಲರಿಗೂ ಅಂತಿಮ ನೋಟಿಸ್ ನೀಡಿ ತಲಾ ₹1000 ದಂಡ ವಿಧಿಸಲಾಗಿದೆ. ಇದೇ ರೀತಿ ಮುಂದುವರೆದರೆ ಡಾಬಾಗಳ ಅನುಮತಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಗುಣ, ಆರೋಗ್ಯ ನಿರೀಕ್ಷಕ ಚಿದಾನಂದ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.