ಕೋಲಾರ: ಜಿಲ್ಲಾ ಕೇಂದ್ರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಘಟಕದ ನಿರ್ವಹಣೆಯ ಹೊಣೆ ಹೊತ್ತಿರುವ ಖಾಸಗಿ ಸಂಸ್ಥೆಯು ತನ್ನ ಜವಾಬ್ದಾರಿ ಮರೆತಿದ್ದು, ಘಟಕದ ನಿರ್ವಹಣಾ ವೆಚ್ಚವು ಆಸ್ಪತ್ರೆಗೆ ಆರ್ಥಿಕವಾಗಿ ಹೊರೆಯಾಗಿದೆ.
ಮಂಗಳೂರಿನ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಯು ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ 2018ರಲ್ಲಿ ಡಯಾಲಿಸಿಸ್ ಘಟಕ ಆರಂಭಿಸಿತು. ಘಟಕದ ನಿರ್ಮಾಣ ವೆಚ್ಚವನ್ನು ಈ ಸಂಸ್ಥೆಯೇ ಭರಿಸಿದ್ದು, ನಿರ್ವಹಣೆ ಜವಾಬ್ದಾರಿಯನ್ನು ಸಹ ಹೊತ್ತಿದೆ.
ಘಟಕ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ಆಸ್ಪತ್ರೆಯಿಂದ ಉಚಿತವಾಗಿ ಸಂಸ್ಥೆಗೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡಬೇಕೆಂದು ಒಪ್ಪಂದವಾಗಿದೆ. ಘಟಕದ ನಿರ್ವಹಣೆಗೆ ಒಬ್ಬರು ವೈದ್ಯರು, ನಾಲ್ಕು ಮಂದಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗೆ ಸಂಸ್ಥೆಯೇ ವೇತನ ಪಾವತಿಸಬೇಕು. ಜತೆಗೆ ಘಟಕಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ ನೀರಿನ ಶುಲ್ಕವನ್ನು ಸಂಸ್ಥೆಯೇ ಭರಿಸಬೇಕೆಂದು ಕರಾರು ಮಾಡಿಕೊಳ್ಳಲಾಗಿದೆ.
10 ಆಸನ ಸಾಮರ್ಥ್ಯದ ಡಯಾಲಿಸಿಸ್ ಘಟಕಕ್ಕೆ ಪ್ರತಿನಿತ್ಯ ಸುಮಾರು 12 ಸಾವಿರ ಲೀಟರ್ ಶುದ್ಧ ನೀರಿನ ಅಗತ್ಯವಿದೆ. ಘಟಕಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆಯಾಗಬೇಕು. ಘಟಕಕ್ಕೆ ನೀರು ಹಾಗೂ ವಿದ್ಯುತ್ ಸೌಕರ್ಯವನ್ನು ಆಸ್ಪತ್ರೆ ಒದಗಿಸುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಜನರೇಟರ್ ಮೂಲಕ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಜನರೇಟರ್‌ಗೆ ಅಗತ್ಯವಿರುವ ಇಂಧನವನ್ನು ಆಸ್ಪತ್ರೆಯಿಂದಲೇ ಖರೀದಿಸಲಾಗುತ್ತಿದೆ.
30 ಮಂದಿಗೆ ಸೇವೆ: ಘಟಕದಲ್ಲಿ 10 ಡಯಾಲಿಸಿಸ್ ಯಂತ್ರೋಪಕರಣಗಳಿದ್ದು, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8ರವರೆಗೆ ಮೂರು ಪಾಳಿಯಲ್ಲಿ ರೋಗಿಗಳಿಗೆ ಸೇವೆ ಒದಗಿಸಲಾಗುತ್ತಿದೆ. ಜಿಲ್ಲೆಯ ರೋಗಿಗಳ ಜತೆಗೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ತಾಲ್ಲೂಕಿನಿಂದಲೂ ಸಾಕಷ್ಟು ರೋಗಿಗಳು ಘಟಕಕ್ಕೆ ಬರುತ್ತಿದ್ದಾರೆ.
ಈ ಪೈಕಿ ಮೂತ್ರಪಿಂಡ ವೈಫಲ್ಯದಿಂದ ಬರುವ ರೋಗಿಗಳ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಬಹುತೇಕ ರೋಗಿಗಳು ಕಡು ಬಡವರಾಗಿದ್ದು, ಡಯಾಲಿಸಿಸ್ ಸೇವೆಗೆ ಅವರಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಪ್ರತಿನಿತ್ಯ ಸುಮಾರು 30 ಮಂದಿಗೆ ಸೇವೆ ನೀಡಲಾಗುತ್ತಿದೆ.
ನೀರಿಗೆ ತತ್ವಾರ: ಆಸ್ಪತ್ರೆಯ 2 ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ರೋಗಿಗಳಿಗೆ ನೀರು ಇಲ್ಲವಾಗಿದೆ. ಮತ್ತೊಂದೆಡೆ ನಗರಸಭೆ ವತಿಯಿಂದ ಟ್ಯಾಂಕರ್ ನೀರು ಪೂರೈಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಡಯಾಲಿಸಿಸ್ ಘಟಕಕ್ಕೆ ನೀರು ಪೂರೈಕೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಆಸ್ಪತ್ರೆಯು ಖಾಸಗಿ ಟ್ಯಾಂಕರ್ ಮಾಲೀಕರಿಂದ ನೀರು ಖರೀದಿಸಿ ಡಯಾಲಿಸಿಸ್ ಘಟಕಕ್ಕೆ ಪೂರೈಕೆ ಮಾಡುತ್ತಿದೆ.
ಘಟಕಕ್ಕೆ ಅಗತ್ಯವಿರುವ ನೀರು ಹಾಗೂ ವಿದ್ಯುತ್ ಸೌಕರ್ಯಕ್ಕಾಗಿ ಆಸ್ಪತ್ರೆಯು ತಿಂಗಳಿಗೆ ಸುಮಾರು ₹ 40 ಸಾವಿರ ವೆಚ್ಚ ಮಾಡುತ್ತಿದೆ. ಆದರೆ, ಈ ಹಣ ಪಾವತಿಸಲು ಸಂಸ್ಥೆಯವರು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಡಯಾಲಿಸಿಸ್ ಘಟಕದ ನಿರ್ವಹಣೆಯೂ ಆಸ್ಪತ್ರೆಗೆ ಆರ್ಥಿಕವಾಗಿ ಹೊರೆಯಾಗಿದೆ.
‘ಡಯಾಲಿಸಿಸ್ ಘಟಕ ಆರಂಭವಾದ ದಿನದಿಂದಲೂ ಅದರ ನಿರ್ವಹಣಾ ವೆಚ್ಚವನ್ನು ಆಸ್ಪತ್ರೆಯೇ ಭರಿಸುತ್ತಿದೆ. ಕೇಂದ್ರಕ್ಕೆ ಅಗತ್ಯವಿರುವ ಸೌಕರ್ಯ ಕಲ್ಪಿಸಿದ್ದರೂ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಯವರು ಶುಲ್ಕ ಪಾವತಿಸುತ್ತಿಲ್ಲ. ಸಂಸ್ಥೆಯವರು ಮೂಲ ಒಪ್ಪಂದದಂತೆ ನಡೆದುಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ವೈದ್ಯರ ಕೊರತೆ: ಏಜೆನ್ಸಿಯು ಘಟಕಕ್ಕೆ ನಿಯೋಜಿಸಿರುವ ಮೂತ್ರಪಿಂಡ (ನೆಫ್ರಾಲಜಿ) ವೈದ್ಯರು ಆಗೊಮ್ಮೆ ಈಗೊಮ್ಮೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿಯನ್ನೇ ತರಬೇತುಗೊಳಿಸಿ ಡಯಾಲಿಸಿಸ್ ಘಟಕಕ್ಕೆ ನಿಯೋಜಿಸಲಾಗಿದೆ. ಘಟಕದಲ್ಲಿ ತಜ್ಞ ವೈದ್ಯರಿಲ್ಲದೆ ರೋಗಿಗಳಿಗೆ ನಿರೀಕ್ಷಿತ ರೀತಿಯಲ್ಲಿ ವೈದ್ಯಕೀಯ ಸೇವೆ ಸಿಗುತ್ತಿಲ್ಲ.
ಅಂಕಿ ಅಂಶ.....
* 10 ಹಾಸಿಗೆ ಸಾಮರ್ಥ್ಯದ ಘಟಕ
* 12 ಸಾವಿರ ಲೀಟರ್ ನೀರು ಅಗತ್ಯ
* 30 ಮಂದಿಗೆ ನಿತ್ಯ ವೈದ್ಯಕೀಯ ಸೇವೆ
* ₹ 40 ಸಾವಿರ ತಿಂಗಳಿಗೆ ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.