ADVERTISEMENT

ವಿಭಿನ್ನ ಶಿಕ್ಷಣ: ಅಸಮಾನತೆ ಜೀವಂತ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಕಳವಳ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 13:27 IST
Last Updated 6 ಮಾರ್ಚ್ 2021, 13:27 IST
ಕೋಲಾರದಲ್ಲಿ ಶನಿವಾರ ನಡೆದ ಯುವಜನ ಹಕ್ಕಿನ ಮೇಳದಲ್ಲಿ ಗಣ್ಯರು ಯುವ ಜನಾಂಗದ ಹಕ್ಕೊತ್ತಾಯದ ಜಾಗೃತಿ ಫಲಕ ಬಿಡುಗಡೆ ಮಾಡಿದರು.
ಕೋಲಾರದಲ್ಲಿ ಶನಿವಾರ ನಡೆದ ಯುವಜನ ಹಕ್ಕಿನ ಮೇಳದಲ್ಲಿ ಗಣ್ಯರು ಯುವ ಜನಾಂಗದ ಹಕ್ಕೊತ್ತಾಯದ ಜಾಗೃತಿ ಫಲಕ ಬಿಡುಗಡೆ ಮಾಡಿದರು.   

ಕೋಲಾರ: ‘ದೇಶದ ಪ್ರತಿ ಪ್ರಜೆಗೂ ಗುಣಾತ್ಮಕ ಮತ್ತು ಸಮಾನ ಶಿಕ್ಷಣ ನೀಡಬೇಕು. ಆದರೆ, ಸರ್ಕಾರಗಳು ವಿಭಿನ್ನ ರೀತಿಯ ಶಿಕ್ಷಣ ನೀಡುವ ಮೂಲಕ ಅಸಮಾನತೆ ಜೀವಂತಗೊಳಿಸುತ್ತಿವೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಯುವ ಮುನ್ನಡೆ ಸಂಘಟನೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವಜನ ಹಕ್ಕಿನ ಮೇಳ ಉದ್ಘಾಟಿಸಿ ಮಾತನಾಡಿ, ‘ಆದ್ಯತೆ ಮೇಲೆ ಎಲ್ಲರಿಗೂ ಸಮಾನ ಶಿಕ್ಷಣ ಕೊಡಬೇಕು. ಇದು ಯುವಜನರ ಮೂಲಭೂತ ಹಕ್ಕಾಗಬೇಕು’ ಎಂದು ಆಶಿಸಿದರು.

‘ಜಾಗತಿಕವಾಗಿ ಭಾರತವು ಅತಿ ಹೆಚ್ಚು ಯುವ ಮಾನವ ಸಂಪನ್ಮೂಲ ಹೊಂದಿರುವ ದೇಶ. ಸರ್ಕಾರಗಳು ಯುವಕ ಯುವತಿಯರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ನೈತಿಕತೆ ಕಟ್ಟಿಕೊಡುವ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ಯುವಶಕ್ತಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಶಿಕ್ಷಣ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳಿಂದ ದೇಶ ದಿವಾಳಿಯಾಗುತ್ತಿದೆ. ಯುವ ಜನರಿಗೆ ಉದ್ಯೋಗ ನೀತಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಯುವ ಪೀಳಿಗೆಯು ನಿರುದ್ಯೋಗ ಸಮಸ್ಯೆಯಿಂದ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ. ಈ ಬಗ್ಗೆ ಸರಕಾರಗಳು ಗಂಭೀರವಾಗಿ ಆಲೋಚನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ದೊಡ್ಡ ದುರಂತ: ‘ಯುವ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಯುವ ಜನರು ದೇಶ ಕಟ್ಟುವ ಕಾರ್ಯದಲ್ಲಿ ಬಳಕೆಯಾಗದೆ ದುಷ್ಟ ಶಕ್ತಿಗಳ ಜತೆ ಸೇರಿ ಕೋಮುವಾದ, ಮೂಲಭೂತವಾದದ ಅಪರಾಧ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ದೊಡ್ಡ ದುರಂತ. ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಉದ್ಯೋಗವನ್ನು ಮೂಲಭೂತ ಹಕ್ಕಾಗಿ ನಿಯಮ ರೂಪಿಸಬೇಕು’ ಎಂದರು.

‘ದೇಶದ ಶಿಕ್ಷಣ ನೈತಿಕತೆ ಕಳೆದುಕೊಳ್ಳುತ್ತಿದೆ. ಸಾಂಸ್ಕೃತಿಕ ದಿವಾಳಿತನ ಹೆಚ್ಚಿದ್ದು, ಸಮಾಜ ಪರಿವರ್ತಿಸುವ ಮೌಲ್ಯಗಳನ್ನು ಕಟ್ಟಿಕೊಡಬೇಕು. ಜಿಲ್ಲೆಯು ಬರಡು ಭೂಮಿ ಮತ್ತು ಬಡತನದಲ್ಲಿ ಇದ್ದರೂ ಜನಪರ ಜಿಲ್ಲೆಯಾಗಿದೆ. ಯುವಕ ಯುವತಿಯರನ್ನು ಸಂಘಟಿಸಿ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತಬೇಕು. ಸಂವಿಧಾನದ ಆಶಯ ಉಳಿಸುವ ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಯುವ ಜನರು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ಜವಾಬ್ದಾರಿ

‘ಜಾಗತೀಕರಣದ ಕಾಲಘಟ್ಟದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಹಕ್ಕೊತ್ತಾಯ ನಿರಂತರವಾಗಿ ನಡೆದರೆ ಮಾತ್ರ ಜಾರಿ ಸಾಧ್ಯ. ಯುವ ಮಾನವ ಸಂಪನ್ಮೂಲ ರಚನಾತ್ಮಕವಾಗಿ ಬಳಕೆಯಾಗುವಂತೆ ಮಾಡುವುದು ಎಲ್ಲರ ಜವಾಬ್ದಾರಿ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್‌.ಮಂಜುನಾಥ್, ಬೆಂಗಳೂರು ಉತ್ತರ ವಿ.ವಿ ಪ್ರಾಧ್ಯಾಪಕ ಪ್ರೊ.ಗುಂಡಪ್ಪ, ಯುವ ಮುನ್ನಡೆ ಸಂಘಟನೆ ಸದಸ್ಯರಾದ ಸುನಿತಾ, ಅನಿತಾ, ರಾಮಕ್ಕ, ಪವಿತ್ರಾ, ಸಂಜನಾ, ದಿಲೀಪ್, ಶಶಿರಾಜ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.