ADVERTISEMENT

ಕೋಲಾರ: ಓದುಗರಿಗೊಂದು ಡಿಜಿಟಲ್ ದೇಗುಲ!

ಜಿಲ್ಲಾಧಿಕಾರಿ ಎಂ.ಆರ್‌.ರವಿ ಮುಂದಾಳತ್ವದಲ್ಲಿ ‘ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರ’ ಸ್ಥಾಪನೆ

ಕೆ.ಓಂಕಾರ ಮೂರ್ತಿ
Published 9 ಜನವರಿ 2026, 7:24 IST
Last Updated 9 ಜನವರಿ 2026, 7:24 IST
<div class="paragraphs"><p>ಕೋಲಾರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸ್ಥಾಪಿಸಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರ</p></div>

ಕೋಲಾರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸ್ಥಾಪಿಸಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರ

   

ಕೋಲಾರ: ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಜಿಲ್ಲಾಧಿಕಾರಿ ಎಂ.ಆರ್‌.ರವಿ ಮುತುವರ್ಜಿಯಿಂದ ಓದುಗರಿಗೊಂದು ಡಿಜಿಟಲ್‌ ದೇಗುಲ ಸ್ಥಾಪಿಸಿದ್ದು, ‘ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರ’ ಎಂದು ಹೆಸರಿಡಲಾಗಿದೆ.

ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಅಧ್ಯಯನಕ್ಕೆ ಉಚಿತವಾಗಿ ಲಭ್ಯವಾಗಲಿದ್ದು, ಡಿಜಿಟಲ್‌ ಕಾಲದ ಎಲ್ಲಾ ಸೌಲಭ್ಯ ಪೂರೈಸಲು ಜಿಲ್ಲಾಡಳಿತ ಹಾಗೂ ಗ್ರಂಥಾಲಯ ಇಲಾಖೆ ಮುಂದಾಗಿವೆ. ಗ್ರಾಮೀಣ ಭಾಗದ ಮಕ್ಕಳನ್ನು ಓದಿನತ್ತ ಆಕರ್ಷಿಸಲು ಹಾಗೂ ಅವರ ಜ್ಞಾನಮಟ್ಟ ವೃದ್ಧಿಸಲು ಇದೊಂದು ಮಹತ್ವದ ಹೆಜ್ಜೆಯಾಗಿದೆ. ಗ್ರಂಥಾಲಯ ಇಲಾಖೆಯಲ್ಲಿ ಇಡೀ ಜಿಲ್ಲೆಯಲ್ಲಿ ಮೊದಲ ಬಾರಿ ಇಂಥ ಸೌಲಭ್ಯ ಸಿಕ್ಕಿದೆ.

ADVERTISEMENT

ನಗರಸಭೆಯಿಂದ ದೊರೆತ ಸುಮಾರು ₹ 18 ಲಕ್ಷ ಅನುದಾನದಲ್ಲಿ ಈ ಕೇಂದ್ರ ನಿರ್ಮಿಸಲಾಗಿದ್ದು, 21 ಕಂಪ್ಯೂಟರ್‌ ಹಾಗೂ 45 ಮಂದಿಗೆ ಆಸನ ವ್ಯವಸ್ಥೆ ಇದೆ. ಇಂಟರ್ನೆಟ್‌, ವೈಫೈ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಬೆಂಗಳೂರಿನ ದಾನಿಯೊಬ್ಬರು 10 ಕಂಪ್ಯೂಟರ್‌ ನೀಡಿದ್ದಾರೆ. ನವೀನ ಬಗೆಯ ಆಕರ್ಷಕ ವಿನ್ಯಾಸ ಹೊಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರು ಈ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಲಿದ್ದಾರೆ.

ಈಗಾಗಲೇ ವಿಸ್ತಾರವಾದ ಹಾಗೂ 75 ಸಾವಿರ ಪುಸ್ತಕಗಳನ್ನು ಒಳಗೊಂಡ ಜಿಲ್ಲಾ ಕೇಂದ್ರ ಗ್ರಂಥಾಲಯ ಇದೆಯಾದರೂ ಕಟ್ಟಡವು ಮೂಲ ಸೌಕರ್ಯಗಳಿಂದ ಬಳಲುತಿತ್ತು. ಜೊತೆಗೆ ಈ ಗ್ರಂಥಾಲಯದ ಕೆಲ ಭಾಗ ಅನುಪಯುಕ್ತವಾಗಿತ್ತು. ಈಚೆಗೆ ಗ್ರಂಥಾಲಯ ಪರಿಶೀಲನೆಗೆಂದು ತೆರಳಿದ್ದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ಕಣ್ಣಿಗೆ ಈ ಅವ್ಯವಸ್ಥೆಯ ದರ್ಶನವಾಗಿತ್ತು.

ಇದಕ್ಕೊಂದು ಹೊಸ ಹೊಳಪು ನೀಡಲು ಮುಂದಾದ ಅವರಿಗೆ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸುವ ಆಲೋಚನೆ ಹೊಳೆಯಿತು.

ನಗರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸುವಾಗ ನಾಲ್ಕೈದು ವರ್ಷಗಳಿಂದ ಬಾಕಿ ಉಳಿದಿದ್ದ ಎಸ್‌ಸಿಪಿ, ಟಿಎಸ್‌ಪಿಯ ಸುಮಾರು ₹ 18 ಲಕ್ಷ ಅನುದಾನ ಉಳಿದಿರುವುದು ಗಮನಕ್ಕೆ ಅವರ ಗಮನಕ್ಕೆ ಬಂತು. ಈಗ ಆ ಹಣವನ್ನೇ ಬಳಸಿ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಲಾಗಿದೆ.

‘ಅಂಬೇಡ್ಕರ್‌ ಸೇರಿದಂತೆ ಹಲವು ಮಹನೀಯರ ಪುಸ್ತಕಗಳು ಡಿಜಿಟಲ್‌ ರೂಪ ಪಡೆದುಕೊಂಡಿವೆ. ಅವುಗಳನ್ನು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು, ಓದುಗರಿಗೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಈ ಡಿಜಿಟಲ್‌ ಗ್ರಂಥಾಲಯ ಉಪಯೋಗವಾಗಲಿದೆ. ಉಚಿತವಾಗಿ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಎಂ.ಆರ್‌.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಜಿಟಲ್‌ ಅಧ್ಯಯನ ಕೇಂದ್ರ ಅಲ್ಲದೇ, ಗ್ರಂಥಾಲಯಕ್ಕೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ‌ಶೌಚಾಲಯ, ನೀರಿನ ಸಮಸ್ಯೆ ಇರುವ ಬಗ್ಗೆ ಗ್ರಂಥಾಲಯ ಬಳಕೆದಾರರು ಜಿಲ್ಲಾಧಿಕಾರಿ ಬಳಿ ಹೇಳಿಕೊಂಡಿದ್ದರು. ಹೀಗಾಗಿ, ಗ್ರಂಥಾಲಯ ಸಮಿತಿಯಿಂದ ₹ 10 ಲಕ್ಷ ಬಳಸಿಕೊಂಡು ಮೂಲ ಸೌಲಭ್ಯ ನೀಡಲಾಗಿದೆ.

‘ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ 75 ಸಾವಿರ ಪುಸ್ತಕಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಎಲ್ಲಾ ಪುಸ್ತಕಗಳು ಸಂಗ್ರಹವಿದೆ. ಆರು ಸಾವಿರ ಸದಸ್ಯರು ಇದ್ದಾರೆ. ಈಗ ಜಿಲ್ಲಾಧಿಕಾರಿಯು ಆಸಕ್ತಿ ವಹಿಸಿ ಡಿಜಿಟಲ್‌ ಅಧ್ಯಯನ ಕೇಂದ್ರ ಸ್ಥಾಪಿಸಿದ್ದು, ಓದುಗರ ಜ್ಞಾನ ವಿಸ್ತರಣೆಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಉಚಿತವಾಗಿ ವೆಬ್‌ಗಳಲ್ಲಿ ಪುಸ್ತಕ ಡೌನ್‌ಲೋಡ್‌ ಮಾಡಿಕೊಂಡು ಓದಬಹುದು’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಸಿ.ಗಣೇಶ್‌ ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರದಲ್ಲಿರುವ ಸೌಲಭ್ಯ
ಈ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳು ಹಾಗೂ ಇತರರ ಪಾಲಿಗೆ ಸಂಪತ್ತು ಇದ್ದಂತೆ. ಅಂಬೇಡ್ಕರ್‌ ಸೇರಿದಂತೆ ಹಲವರ ಪುಸ್ತಕ ಇ–ಬುಕ್‌ ಆಗಿ ಪರಿವರ್ತಿತವಾಗುತ್ತಿದ್ದು ಜ್ಞಾನಾರ್ಜಗೆಗೆ ಸುಲಭವಾಗಲಿದೆ
ಎಂ.ಆರ್‌.ರವಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.