ಮೈನಿಂಗ್ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಪಡೆಯುತ್ತಿರುವುದು
ಕೆಜಿಎಫ್: ಬೇಸಿಗೆ ಶುರುವಾಗುತ್ತಿದ್ದಂತೆಯೇ ನಗರದಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯನ್ನು ಜನರು ಎದುರಿಸುತ್ತಿದ್ದಾರೆ. ಟ್ಯಾಂಕರ್‌ಗಳು ಜೀವ ಜಲವಾಗಿ ಮಾರ್ಪಟ್ಟಿವೆ. ಪ್ರತಿನಿತ್ಯ ನೂರಾರು ಟ್ಯಾಂಕರ್‌ಗಳು ಜನರ ನೀರಿನ ದಾಹ ನೀಗಿಸುವ ಪ್ರಯತ್ನ ಮಾಡುತ್ತಿವೆ.
ನಗರಕ್ಕೆ ಒಂದು ಶತಮಾನದಿಂದಲೂ ಬೇತಮಂಗಲ ಜಲಾಶಯದಿಂದ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಜಲಾಶಯದ ನೀರು ಸಿಹಿಯಾಗಿದ್ದು, ಅದರ ರುಚಿ ಕಂಡ ಬ್ರಿಟಿಷರು ಬೇತಮಂಗಲದಿಂದ ನಗರಕ್ಕೆ ಸುಮಾರು ಹದಿಮೂರು ಕಿ.ಮೀ ಉದ್ದದ ಪೈಪ್‌ಗಳನ್ನು ಶತಮಾನದ ಹಿಂದೆಯೇ ಅಳವಡಿಸಿದ್ದರು.
ಆದರೆ, ಬೇತಮಂಗಲ ಘಟಕದಲ್ಲಿ ಸಂಸ್ಕರಣೆ ಪ್ರಮಾಣ ಕಡಿಮೆಯಾಗಿರುವುದರಿಂದ ನಗರಕ್ಕೆ ಅಗತ್ಯ ಪ್ರಮಾಣದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಕೊಳವೆ ಬಾವಿಯಲ್ಲಿ ಸಿಗುವ ಉಪ್ಪು ನೀರನ್ನೇ ಅವಲಂಬಿಸಬೇಕಾಗಿದೆ. ಮುಂಜಾನೆ 5ರಿಂದ ಶುರುವಾಗುವ ಟ್ಯಾಂಕರ್‌ಗಳು ಬೆಳಗ್ಗೆ ನಗರದ ಎಲ್ಲ ಭಾಗದಲ್ಲಿಯೂ ಕಾಣ ಸಿಗುತ್ತವೆ.
ಪ್ರತಿನಿತ್ಯ ನಗರಕ್ಕೆ ಸುಮಾರು 35ಲಕ್ಷದಿಂದ 40ಲಕ್ಷ ಲೀಟರ್ ನೀರಿನ ಸರಬರಾಜು ಆಗುತ್ತಿದೆ. ಆದರೆ, ನಗರದ ಅವಶ್ಯ 200ಲಕ್ಷ ಲೀಟರ್. ದೊಡ್ಡ ಪ್ರಮಾಣದ ನೀರಿನ ಕೊರತೆಯನ್ನು ಜಲಮಂಡಳಿ ಎದುರಿಸುತ್ತಿದೆ. ಬೇತಮಂಗಲ ಜಲಾಶಯದಲ್ಲಿ 90 ಲಕ್ಷ ಲೀಟರ್ ನೀರನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಘಟಕ ಹೊಂದಿದೆ. ಆದರೆ, ತೀರಾ ಹಳೆಯದಾದ ಘಟಕ ನವೀಕರಿಸಿಲ್ಲ. ಇದರಿಂದಾಗಿ 40ಲಕ್ಷ ಲೀಟರ್ ಮಾತ್ರ ನೀರು ಸಂಸ್ಕರಣೆಯಾಗುತ್ತಿದೆ. ಅದರಲ್ಲಿ 75ಸಾವಿರ ಲೀಟರ್ ನೀರು ಬೇತಮಂಗಲ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ.
ನಗರದ ಸುತ್ತಮುತ್ತ ಈಚೆಗೆ ಕೈಗಾರಿಕೆ ಸ್ಥಾಪನೆಗಾಗಿ ಸುಮಾರು 900 ಎಕರೆ ಜಮೀನನ್ನು ಮೀಸಲು ಇಡಲಾಗಿದೆ. ಈಗಲೇ ನಗರದ ಜನರು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಇನ್ನು ಕೈಗಾರಿಕೆ ಮತ್ತು ಸಮಗ್ರ ಟೌನ್‌ಶಿಪ್ ಬಂದರೆ ಅವುಗಳಿಗೆ ನೀರು ಎಲ್ಲಿಂದ ತರುವುದು ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳಿಂದ ಇಲ್ಲವೇ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇಲ್ಲ. ನಾಗಾವರಂ ಕಣಿವೆ, ಯರಗೋಳು ಯೋಜನೆ ಮತ್ತು ಲಕ್ಷ್ಮಿಸಾಗರ ಕೆರೆಯಿಂದ ನೀರು ತರಬೇಕು ಎನ್ನುವ ಯೋಜನೆಗೆ ಇನ್ನೂ ಚಾಲನೆ ನೀಡಿಲ್ಲ.
ಕುಡಿಯುವ ನೀರು ನಲ್ಲಿಯಲ್ಲಿ ಬರುವುದೇ ಇಲ್ಲ. ತಿಂಗಳ ಬಜೆಟ್‌ನಲ್ಲಿ ನೀರಿಗಾಗಿ ಕೂಡ ಹಣ ಮೀಸಲು ಇಡಬೇಕುಗೋಪಿನಾಥ್ ಎಸ್‌ಟಿ ಬ್ಲಾಕ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.