ADVERTISEMENT

2 ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:51 IST
Last Updated 25 ಜನವರಿ 2026, 5:51 IST
ಬೇತಮಂಗಲ ಸಮೀಪದ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲೇಹಳ್ಳಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ
ಬೇತಮಂಗಲ ಸಮೀಪದ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲೇಹಳ್ಳಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ   

ಬೇತಮಂಗಲ: ಕೆಜಿಎಫ್ ತಾಲ್ಲೂಕಿನ ನಾಗಲೇಹಳ್ಳಿ ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಎರಡು ವರ್ಷಗಳಿಂದ ಕೆಟ್ಟು ನಿಂತಿದೆ. 

ಆದರೆ, ಈ ಘಟಕವನ್ನು ಇನ್ನೂ ಸರಿಪಡಿಸದ ಹಿನ್ನೆಲೆಯಲ್ಲಿ ಗ್ರಾಮದ ಜನರು ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸಿ ಕುಡಿಯುವ ಅನಿವಾರ್ಯತೆ ಎದುರಾಗಿದೆ. 

ನಾಗಲೇಹಳ್ಳಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ 4–5 ಕಿ.ಮೀ ದೂರದಲ್ಲಿರುವ ಬೇತಮಂಗಲಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುವ ಅಗತ್ಯ ಎರುದಾಗಿದೆ ಎಂದು ಮಹಿಳೆಯೊಬ್ಬರು ಹೇಳಿದರು. 

ADVERTISEMENT

ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು ಹಾಗೂ ಕೂಲಿ ಕೆಲಸಕ್ಕೆ ಹೋಗುವ ಜನರೇ ಈ ಭಾಗದಲ್ಲಿ ವಾಸವಾಗಿದ್ದಾರೆ. ಆದರೆ, ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ 4–5 ಕಿ.ಮೀ ಹೋಗಬೇಕಿರುವುದು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾಗಲೇಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯನ್ನು ಗುತ್ತಿಗೆದಾರರೇ ನೋಡಿಕೊಳ್ಳುತ್ತಿದ್ದರು. ಘಟಕ ಕೆಟ್ಟು ನಿಂತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ತಕ್ಷಣ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿರುವುದರಿಂದ ಪ್ರತಿನಿತ್ಯ ಕೆಲಸ. ಕಾರ್ಯ ಬಿಟ್ಟು ಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಗ್ರಾಮಕ್ಕೆ ಹೋಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ
ರಾಧಮ್ಮ ಮಹಿಳೆ ನಾಗಲೇಹಳ್ಳಿ
ಶುದ್ಧ ಕುಡಿಯುವ ನೀರಿನ ಘಟಕವನ್ನು ಈಗಾಗಲೇ ನಾನು ಒಂದು ಬಾರಿ ವೈಯಕ್ತಿಕ ಹಣದಲ್ಲಿ ದುರಸ್ತಿಪಡಿಸಲಾಗಿತ್ತು. ಆದರೆ ಮತ್ತೆ ಕೆಟ್ಟು ನಿಂತಿದ್ದು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ
ಗಂಗಾಧರ್ ಗ್ರಾ.ಪಂ ಸದಸ್ಯರು ನಾಗಲೇಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.