ADVERTISEMENT

ಅರಣ್ಯ ನಾಶದಿಂದ ಮಳೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:58 IST
Last Updated 18 ಸೆಪ್ಟೆಂಬರ್ 2019, 14:58 IST
ಕೃಷಿ ವಿಜ್ಞಾನ ಕೇಂದ್ರವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಸಸಿ ನೆಟ್ಟರು.
ಕೃಷಿ ವಿಜ್ಞಾನ ಕೇಂದ್ರವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಸಸಿ ನೆಟ್ಟರು.   

ಕೋಲಾರ: ‘ಅರಣ್ಯ ಸಂಪತ್ತಿನ ನಾಶದಿಂದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕ್ಷೀಣಿಸುತ್ತಿದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.

ಕೃಷಿ ವಿಜ್ಞಾನ ಕೇಂದ್ರವು ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬಯಲುಸೀಮೆ ಪ್ರದೇಶವಾದ ಕೋಲಾರ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ಉತ್ತಮ ಮಳೆಯಾಗಿಲ್ಲ. ಸತತ ಬರ ಪರಿಸ್ಥಿತಿಯಿದ್ದು, ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಹಿಂದೆ ಅರಣ್ಯ ಸಂಪತ್ತು ಸಮೃದ್ಧವಾಗಿತ್ತು. ಹೀಗಾಗಿ ಸಕಾಲಕ್ಕೆ ಮಳೆಯಾಗಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಗಿಡ ಮರ ನಾಶದಿಂದ ವಾತಾವರಣ ಕಲುಷಿತಗೊಂಡು ಆರೋಗ್ಯ ಸಮಸ್ಯೆ ಎದುರಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ’ ಎಂದು ವಿಷಾದಿಸಿದರು.

ADVERTISEMENT

‘ಬರ ನಿವಾರಣೆಗೆ ಪ್ರಾಕೃತಿಕ ಸಮತೋಲನ ಕಾಪಾಡುವುದು ಅತ್ಯಗತ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಶಾಲೆ ಆವರಣ ಹಾಗೂ ಸರ್ಕಾರಿ ಖಾಲಿ ಜಾಗದಲ್ಲಿ ಗಿಡ ನೆಟ್ಟು ಬೆಳೆಸಬೇಕು. ಪರಿಸರ ಸಂರಕ್ಷಣೆಗೆ ಸಂಘ ಸಂಸ್ಥೆಗಳು, ಸಾರ್ವಜನಿಕರ ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಗಗನಚುಂಬಿ ಕಟ್ಟಡ: ‘ಈಗ ಖಾಲಿ ಜಾಗದಲ್ಲೆಲ್ಲಾ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಮರ ಗಿಡ ಕಡಿದಿರುವುದರಿಂದ ಪ್ರಾಣಿ ಪಕ್ಷಿ ಸಂಕುಲ ನಾಶವಾಗುತ್ತಿದೆ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು ಅಭಿಪ್ರಾಯಪಟ್ಟರು.

‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ. ಶುದ್ಧ ಗಾಳಿಗಾಗಿ ರಸ್ತೆಗಳ ಅಕ್ಕಪಕ್ಕ ಗಿಡ ನೆಟ್ಟು ಬೆಳೆಸಬೇಕು. ಪರಿಸರ ನಾಶದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್, ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ಕೆ.ಎಸ್.ನಾಗರಾಜ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.