ಕೋಲಾರ: ಇಸ್ಲಾಂ ಧರ್ಮದ ಪ್ರವರ್ತಕ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಮಸೀದಿಗಳನ್ನು ಅಲಂಕರಿಸಲಾಗಿತ್ತು.
ನಗರದ ಅಂಜುಮನ್ ಎ ಇಸ್ಲಾಮಿಯಾ ಕಚೇರಿ ಕಟ್ಟಡದಲ್ಲಿ ಮಧ್ಯಾಹ್ನ ಹಸಿರು ಧ್ವಜಾರೋಹಣ ನಡೆಯಿತು. ಬಳಿಕ ಕಚೇರಿಯಿಂದ ಆರಂಭವಾದ ಮೆರವಣಿಗೆಯು ಎಂ.ಬಿ.ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ವೃತ್ತ, ಕ್ಲಾಕ್ ಟವರ್ ಮೂಲಕ ಸಾಗಿತು. ಬೆಂಗಳೂರು ರಸ್ತೆಯ ಶಾಹಿ ಈದ್ಗಾ ಮೈದಾನದಲ್ಲಿ ಸಂಜೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮೆರವಣಿಗೆಯು ವಾಪಸ್ ಅಂಜುಮನ್ ಎ ಇಸ್ಲಾಮಿಯಾ ಕಟ್ಟಡಕ್ಕೆ ಬಂದಿತು. ಅಲ್ಲಿ ವೇದಿಕೆ ಪ್ರವಚನ ಕಾರ್ಯಕ್ರಮ ನಡೆಯಿತು. ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು. ಹೆಚ್ಚಿನವರು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಇಸ್ಲಾಂ ಧರ್ಮ ಸಂಬಂಧದ ಬೃಹತ್ ಬಾವುಟ, ಧ್ವಜಗಳನ್ನು ಬೀಸುತ್ತ ಘೋಷಣೆ ಹಾಕುತ್ತ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಿರಿಯರಿಂದ ಹಿರಿಯರ ವರೆಗೆ ಎಲ್ಲಾ ವಯೋಮಾನದವರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಅಲ್ಲಲ್ಲಿ ಟೆಂಪೋ, ಕಟ್ಟಡಗಳ ಮೇಲೆ ನಿಂತು ಪುಷ್ಪಾರ್ಚನೆ ಮಾಡಲಾಯಿತು.
ಮೆರವಣಿಗೆಯುದ್ದಕ್ಕೂ ಪೈಗಂಬರ್ ಅವರ ಜೀವನ ಸಂದೇಶಗಳನ್ನು ಹೇಳಿದರು. ಕೆಲ ಸಂಘ ಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಮೆರವಣಿಗೆ ಹಾದು ಹೋಗುವವರೆಗೆ ಪೊಲೀಸರು ಬೇರೆ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮದ್ಯದ ಅಂಗಡಿಗಳನ್ನು ನಗರ ವ್ಯಾಪ್ತಿಯಲ್ಲಿ ಇಡೀ ದಿನ ಮುಚ್ಚಲಾಗಿತ್ತು.
ಪೊಲೀಸರಿಂದ ನಗರದಲ್ಲಿ ಬಿಗಿ ಬಂದೋಬಸ್ತ್ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಭಾಗಿ ಪ್ರಾರ್ಥನೆ, ಪ್ರವಚನ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.