ADVERTISEMENT

ಚುನಾವಣಾ ವ್ಯವಸ್ಥೆ ಬದಲಾಗುವವರೆಗೆ ಭ್ರಷ್ಟಾಚಾರ ನಿಲ್ಲದು: ವಿ.ಆರ್.ಸುದರ್ಶನ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:50 IST
Last Updated 20 ಅಕ್ಟೋಬರ್ 2025, 4:50 IST
ವಿ.ಆರ್.ಸುದರ್ಶನ್
ವಿ.ಆರ್.ಸುದರ್ಶನ್   

ಕೋಲಾರ: ‘ನಮ್ಮ ಚುನಾವಣಾ ವ್ಯವಸ್ಥೆ ಬದಲಾಗುವವರೆಗೆ ಭ್ರಷ್ಟಾಚಾರ ನಿಲ್ಲದು. ಒತ್ತಡಗಳ ನಡುವೆ ಕೆಲಸ ಮಾಡುವ ನೌಕರರನ್ನು ಮಾತ್ರ ದೂರುವುದು ಸರಿಯಲ್ಲ’ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪುರುಷೋತ್ತಮ್ ದಂಪತಿಗೆ ಶಿಕ್ಷಕ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಕ್ಕುಗಳನ್ನು ಪ್ರತಿಪಾದಿಸುವಾಗ ಜವಾಬ್ದಾರಿಗಳನ್ನು ಅರಿಯಬೇಕು. ನೌಕರರಿಗೆ ಒತ್ತಡಗಳಿರುವಂತೆ ಅಪೇಕ್ಷೆಗಳು ಇರುತ್ತವೆ. ಸಂವಿಧಾನವೇ ಶ್ರೇಷ್ಠ, ಅದರಡಿಯಲ್ಲೇ ಎಲ್ಲರೂ ಕೆಲಸ ಮಾಡಬೇಕು. ಜನಪರ ಸಂವಿಧಾನ ದೇಶದಲ್ಲಿ ಇರುವುದರಿಂದಲೇ ಅವ್ಯವಸ್ಥೆ, ಜಾತಿಯತೆ, ಭ್ರಷ್ಟಾಚಾರದ ನಡುವೆಯೂ ಒಂದಷ್ಟು ಅಭಿವೃದ್ದಿ ಕಾಣಲು ಸಾಧ್ಯವಾಗಿದೆ ಎಂದರು.

ADVERTISEMENT

ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಮಾಧ್ಯಮ ತೆರೆದ ಮನಸ್ಸಿನಿಂದ ಇರಬೇಕು. ಜನರಿಗೆ ಈಗಾಗಲೇ ರಾಜಕಾರಣದಲ್ಲಿರುವವರು ಮತ್ತು ನೌಕರರ ಮೇಲೆ ಸಿಟ್ಟಿದೆ. ಅದು ಸರಿಹೋಗಲು ಬದ್ಧತೆಯಿಂದ ಕರ್ತವ್ಯ ನಿರ್ವಹಣೆ ಅಗತ್ಯವಿದೆ. ನೌಕರರ ಸಂವಿಧಾನಬದ್ಧ ಕರ್ತವ್ಯದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು ಎಂದು ಹೇಳಿದರು.

ಸಮೀಕ್ಷೆ ನಡೆಯದೇ ಸಂವಿಧಾನದ ಆಶಯಗಳಂತೆ ಸೌಲಭ್ಯಗಳು ಹಂಚಿಕೆಯಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲಾ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಸುರೇಶ್‍ಬಾಬು, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ನೌಕರರ ಸಂಘದ ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕ ವೆಂಕಟಾಚಲಪತಿಗೌಡ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಪತ್ರಕರ್ತ ಕೆ.ಎಸ್.ಗಣೇಶ್, ಕೆಜಿಎಫ್ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪಿಡಿಒ ನಾಗರಾಜ್, ಗೋವಿಂದ್, ಸರ್ವೆ ರವಿ, ಸುಬ್ರಮಣಿ, ಗೆಳೆಯರ ಬಳಗದ ಚಿಕ್ಕಣ್ಣ, ವೆಂಕಟರಾಂ, ಸೋಮಶೇಖರ್, ಸುನೀಲ್, ಸಂದೀಪ್, ಚಂದು, ಖಜಾನೆ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.