ADVERTISEMENT

ಆನೆ ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:49 IST
Last Updated 30 ಅಕ್ಟೋಬರ್ 2020, 10:49 IST
ಬಂಗಾರಪೇಟೆ ತಾಲ್ಲೂಕಿನ ಶ್ರೀನಿವಾಸನಗರದಲ್ಲಿ ಆನೆಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆ ನಾಶಪಡಿಸಿದ್ದು, ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಪರಿಶೀಲಿಸಿದರು
ಬಂಗಾರಪೇಟೆ ತಾಲ್ಲೂಕಿನ ಶ್ರೀನಿವಾಸನಗರದಲ್ಲಿ ಆನೆಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆ ನಾಶಪಡಿಸಿದ್ದು, ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಪರಿಶೀಲಿಸಿದರು   

ಬಂಗಾರಪೇಟೆ: ತಾಲ್ಲೂಕಿನ ಕೇತಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ತೋಟಗಳಿಗೆ ದಾಳಿ ನಡೆಸಿರುವ ಕಾಡಾನೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಪಡಿಸಿವೆ.

ಕಟಾವಿಗೆ ಬಂದಿದ್ದ ರಾಗಿ, ಟೊಮೆಟೊ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ನಾಶಪಡಿಸಿವೆ. ಈ ಬಾರಿ ಉತ್ತಮ ಮಳೆಯಾದ ಕಾರಣ ವಿವಿಧ ಬೆಳೆಗಳು ಸಮೃದ್ಧಿಯಾಗಿ ಬೆಳೆದಿದ್ದವು. ಆದರೆ, ರೈತರ ಕೈ ಸೇರುವ ಮೊದಲೇ ಆನೆ ದಾಳಿಗೆ ನಾಶವಾಗಿವೆ.

‘ಎರಡು ಮರಿಗಳಿಗೆ ಜನ್ಮ ನೀಡಿದ್ದು, ಇನ್ನೂ ಕೆಲದಿನಗಳ ಕಾಲ ಇಲ್ಲಿಯೇ ಠಿಕಾಣಿ ಹೂಡುವ ಸಂಭವವಿದೆ. ಅವುಗಳನ್ನು ಹಿಮ್ಮಟ್ಟಿಸಲು ಸಮಯಾವಕಾಶ ಬೇಕಿದೆ. ಕೆಲವೇ ದಿನಗಳಲ್ಲಿ ಆನೆಗಳನ್ನು ಕಾಡಿನೊಳಕ್ಕೆ ಓಡಿಸಲು ಕ್ರಮವಹಿಸಲಾಗುವುದು’ ಎಂದುವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದರು.

ADVERTISEMENT

ಆನೆಗಳ ಹಿಂಡು ಕಾಡಿನೊಳಕ್ಕೆ ಹೋಗುವ ತನಕ ಅವುಗಳಿಗೆ ಯಾರೂ ತೊಂದರೆ ನೀಡಬಾರದು. ಬೆಂಕಿ ಹಾಕುವುದು, ಪಟಾಕಿ ಸಿಡಿಸುವುದು ಮತ್ತು ಶಬ್ದ ಮಾಡಿದರೆ ಮರಿಗಳ ಆರೈಕೆಯಲ್ಲಿರುವ ಆನೆಗಳು ಕೆರಳಿ ರೈತರಿಗೆ ಇನ್ನಷ್ಟು ತೊಂದರೆ ನೀಡುವ ಸಂಭವವಿದೆ ಎಂದು ಎಚ್ಚರಿಸಿದರು.

ರೈತರು ಕೆಲವು ದಿನಗಳ ಮಟ್ಟಿಗೆ ಸಂಜೆ 6 ಗಂಟೆ ನಂತರ ಜಮೀನಿನ ಕಡೆ ಮತ್ತು ಕಾಲುದಾರಿಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ಕೋರಿದರು.

ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ನಾಶದ ಜತೆಗೆ ಕೊಳವೆಬಾವಿ ಮತ್ತು ಫೆನ್ಸಿಂಗ್ ನಾಶ ಮಾಡಿದ್ದು, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಶಶಿಧರ ರೆಡ್ಡಿ, ಗೋಪಾಲರೆಡ್ಡಿ, ಬಾಲರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.