ADVERTISEMENT

ಕೋಲಾರ | ಬಾಡಿಗೆ ಕರಾರು ಅಂತ್ಯ: ಮಳಿಗೆದಾರರಿಗೆ ಬಿಸಿ ಮುಟ್ಟಿಸಿದ ನಗರಸಭೆ

ತೀವ್ರ ವಿರೋಧದ ನಡುವೆಯೂ ಮಳಿಗೆ ಖಾಲಿ ಮಾಡಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 15:14 IST
Last Updated 31 ಜನವರಿ 2022, 15:14 IST
ನಗರಸಭೆ ಮಳಿಗೆಗಳಲ್ಲಿ ಅನಧಿಕೃತವಾಗಿ ಮುಂದುವರಿದಿದ್ದ ಮಳಿಗೆದಾರರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೋಲಾರದ ಎಂ.ಜಿ ರಸ್ತೆಯಲ್ಲಿ ಸೋಮವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ನಗರಸಭೆ ಮಳಿಗೆಗಳಲ್ಲಿ ಅನಧಿಕೃತವಾಗಿ ಮುಂದುವರಿದಿದ್ದ ಮಳಿಗೆದಾರರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೋಲಾರದ ಎಂ.ಜಿ ರಸ್ತೆಯಲ್ಲಿ ಸೋಮವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು   

ಕೋಲಾರ: ಬಾಡಿಗೆ ಕರಾರು ಅವಧಿ ಮುಗಿದ ನಂತರವೂ ನಗರಸಭೆ ಮಳಿಗೆಗಳಲ್ಲಿ ಅನಧಿಕೃತವಾಗಿ ಮುಂದುವರಿದಿದ್ದ ಮಳಿಗೆದಾರರನ್ನು ರಾಜಕೀಯ ಒತ್ತಡ ಹಾಗೂ ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಸೋಮವಾರ ಖಾಲಿ ಮಾಡಿಸಿದರು.

ನಗರದ ಎಂ.ಜಿ ರಸ್ತೆಯ ಶತಶೃಂಗ ವಾಣಿಜ್ಯ ಸಮುಚ್ಚಯ, ಚಂದ್ರಮೌಳೇಶ್ವರ ಸಮುಚ್ಚಯ, ಮುನ್ಸಿಪಲ್‌ ಆಸ್ಪತ್ರೆ ಬಳಿಯ ವಾಣಿಜ್ಯ ಸಮುಚ್ಚಯ, ಅಂಚೆ ಕಚೇರಿ ರಸ್ತೆಯ ವಾಣಿಜ್ಯ ಸಮುಚ್ಚಯದಲ್ಲಿರುವ ನಗರಸಭೆಗೆ ಸೇರಿದ 205 ಮಳಿಗೆಗಳಲ್ಲಿ ಮಳಿಗೆದಾರರು ಹಲವು ವರ್ಷಗಳಿಂದ ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದರು.

ಈ ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಹರಾಜು ಹಾಕಲಾಗಿತ್ತು. ಆದರೂ ಮಳಿಗೆದಾರರು ಮಳಿಗೆ ಬಿಟ್ಟು ಕೊಟ್ಟಿರಲಿಲ್ಲ. ನಗರಸಭೆ ಅಧಿಕಾರಿಗಳು ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಮಳಿಗೆದಾರರು ಖಾಲಿ ಮಾಡದೆ ನಿಯಮಬಾಹಿರವಾಗಿ ಮಳಿಗೆಗಳನ್ನು ವಶದಲ್ಲಿ ಇರಿಸಿಕೊಂಡಿದ್ದರು. ಮತ್ತೊಂದೆಡೆ 15 ಮಳಿಗೆದಾರರು ಅಧಿಕಾರಿಗಳ ನೋಟಿಸ್‌ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ADVERTISEMENT

ಹರಾಜಿನಲ್ಲಿ ಹೊಸದಾಗಿ ಮಳಿಗೆ ಪಡೆದವರು ಮಳಿಗೆ ಬಿಡಿಸಿ ಕೊಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಳೆ ಮಳಿಗೆದಾರರನ್ನು ಖಾಲಿ ಮಾಡಿಸದಂತೆ ಅಧಿಕಾರಿಗಳ ಮೇಲೆ ತೀವ್ರ ರಾಜಕೀಯ ಒತ್ತಡವಿತ್ತು. ಆದರೂ ರಾಜಕೀಯ ಒತ್ತಡ ಲೆಕ್ಕಿಸದೆ ಪೊಲೀಸ್‌ ಭದ್ರತೆಯಲ್ಲಿ ಸೋಮವಾರ ಕಾರ್ಯಾಚರಣೆಗಿಳಿದ ಅಧಿಕಾರಿಗಳು 205 ಮಳಿಗೆಗಳ ಪೈಕಿ 150 ಮಳಿಗೆಗಳನ್ನು ಖಾಲಿ ಮಾಡಿಸಿದರು.

ತರಕಾರಿ, ಹಣ್ಣು, ಬಟ್ಟೆ, ಪಾದರಕ್ಷೆ, ಪಾತ್ರೆ, ಮೆಡಿಕಲ್ಸ್‌, ಎಲೆಕ್ಟ್ರಾನಿಕ್‌ ಉಪಕರಣ ವ್ಯಾಪಾರಿಗಳು ಸೇರಿದಂತೆ ವಿವಿಧ ಮಳಿಗೆದಾರರನ್ನು ಖಾಲಿ ಮಾಡಿಸಲಾಯಿತು. ಕೆಲ ಮಳಿಗೆಗಾರರು ಸ್ವಇಚ್ಛೆಯಿಂದ ಮಳಿಗೆಯಲ್ಲಿನ ಸರಕುಗಳನ್ನು ಸಾಗಿಸಿಕೊಂಡು ಹೋದರು. ಮತ್ತೆ ಕೆಲ ಮಳಿಗೆದಾರರು ಮಳಿಗೆಯ ಬಾಗಿಲು ಸಹ ತೆರೆಯಲಿಲ್ಲ. ಅಧಿಕಾರಿಗಳು ಆ ಮಳಿಗೆಗಳ ಬೀಗ ತೆರೆಸಿ ಸರಕುಗಳನ್ನು ಹೊರ ಹಾಕಿಸಿದರು. ಬಳಿಕ ಮಳಿಗೆದಾರರು ವಾಹನಗಳಲ್ಲಿ ಸರಕನ್ನು ಮನೆಗೆ ಕೊಂಡೊಯ್ದರು.

ಕೆಲ ಮಳಿಗೆದಾರರು ಜನಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಕರೆ ಮಾಡಿಸಿ ರಾಜಕೀಯ ಒತ್ತಡ ತರುವ ಪ್ರಯತ್ನ ಮಾಡಿದರು. ಆದರೆ, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ.

ಬಿಗುವಿನ ವಾತಾವರಣ: ಮುನ್ನೆಚ್ಚರಿಕೆ ಕ್ರಮವಾಗಿ ಎಂ.ಜಿ ರಸ್ತೆ, ಅಂಚೆ ಕಚೇರಿ ರಸ್ತೆ ಸೇರಿದಂತೆ ಕಾರ್ಯಾಚರಣೆ ಸ್ಥಳದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಅಲ್ಲದೇ, ಸುತ್ತಮುತ್ತಲ ಪ್ರದೇಶದಲ್ಲಿ ಬ್ಯಾರಿಕೇಡ್‌ ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಯಿತು.

ಮಳಿಗೆದಾರರು ಕಾರ್ಯಾಚರಣೆಗೆ ಆಕ್ಷೇಪಣೆ ವ್ಯಕ್ತಪಡಿಸಿ ನಗರಸಭೆ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರ ಜತೆಯೂ ಮಳಿಗೆದಾರರು ವಾಗ್ವಾದ ನಡೆಸಿದರು. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ಮಳಿಗೆದಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಂಗಳವಾರವೂ (ಫೆ.1) ಕಾರ್ಯಾಚರಣೆ ಮುಂದುವರಿಯಲಿದ್ದು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಭಾಗದ ಅಂತರಗಂಗೆ ಬೆಟ್ಟದ ರಸ್ತೆಯಲ್ಲಿನ ವಾಣಿಜ್ಯ ಸಮುಚ್ಚಯ, ಅಮ್ಮವಾರಿಪೇಟೆಯ ಮಾಂಸದ ಮಾರುಕಟ್ಟೆಯಲ್ಲಿನ ಮಳಿಗೆಗಳಲ್ಲಿನ ಮಳಿಗೆದಾರರನ್ನು ಖಾಲಿ ಮಾಡಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.