
2024-2025ರಲ್ಲಿ 12,159 ಯೂನಿಟ್ ರಕ್ತ ಸಂಗ್ರಹಣೆ | ಜಿಲ್ಲೆಯಲ್ಲಿ ಐದು ರಕ್ತ ಬ್ಯಾಂಕ್‍ಗಳು |ಕಾರ್ಯನಿರ್ವಹಣೆ ಜಿಲ್ಲೆಯಲ್ಲಿ ವ್ಯಸನಕ್ಕೆ ದಾಸರಾಗಿರುವ 1,378 ಮಂದಿ
ಕೋಲಾರ: ಜಿಲ್ಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ರಕ್ತದಾನ ಶಿಬಿರ ಮಾಡಿ ರಕ್ತ ಶೇಖರಿಸಿ ಇಡಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಕ್ತ ಬ್ಯಾಂಕ್, ಏಡ್ಸ್ ನಿಯಂತ್ರಣ, ಲಿಂಗತ್ವ ಅಲ್ಪಸಂಖ್ಯಾತರ ಆರೋಗ್ಯ, ಡ್ರಗ್ಸ್ ನಿಯಂತ್ರಣ ಮುಂತಾದ ವಿಷಯಗಳ ಕುರಿತು ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಅಧಿಕಾರಿಗಳು ಮಾಹಿತಿ ನೀಡಿ, ‘ಜಿಲ್ಲೆಯಲ್ಲಿ ಐದು ರಕ್ತ ಬ್ಯಾಂಕ್‍ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 8,811 ಯೂನಿಟ್ ರಕ್ತ ಶೇಖರಣೆಯಾಗಿದೆ. ಆದಾಗಿಯೂ ಕೆಲವೊಮ್ಮೆ ರಕ್ತದ ಕೊರತೆ ಉಂಟಾಗುತ್ತದೆ’ ಎಂದರು.
ಆಗ ಜಿಲ್ಲಾಧಿಕಾರಿ ಮಾತನಾಡಿ, ‘2024-2025ರಲ್ಲಿ 12,159 ಯೂನಿಟ್ ರಕ್ತ ಸಂಗ್ರಹಣೆಯಾಗಿ ಶೇ 90ರಷ್ಟು ಸಾಧನೆಯಾಗಿತ್ತು. ಆದರೆ, 2025-26ನೇ ಸಾಲಿನ ಡಿಸೆಂಬರ್ ವರೆಗೆ ಕೇವಲ 8,811 ಯೂನಿಟ್ ರಕ್ತ ಸಂಗ್ರಹಣೆಯಾಗಿ ಶೇ 65ರಷ್ಟು ಸಾಧನೆಯಾಗಿದೆ. ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಿ ರಕ್ತ ಸಂಗ್ರಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಎಚ್‌ಐವಿ ಸೋಂಕಿತರು, ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಅದನ್ನು ಸಂಬಂಧಪಟ್ಟರು ಸದುಪಯೋಗಪಡಿಸಿಕೊಳ್ಳಬೇಕು. ಲೈಂಗಿಕ ಕಾರ್ಯಕರ್ತೆಯರನ್ನು ಮುಖ್ಯ ವಾಹಿನಿಗೆ ತರುವಂತೆ ಪ್ರಯತ್ನ ಸಹ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಯುವಜನತೆ ಸೇರಿದಂತೆ ಇತರ ವರ್ಗದವರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು, ಇವುಗಳನ್ನು ತಡೆಯಲು ಅವರಿಗೆ ಮಾಹಿತಿ, ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವ್ಯಸನಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಸಕ್ರಿಯರಾಗಬೇಕು. ಮುಖ್ಯವಾಗಿ ಯುವಜನರು ಇಂತಹ ಚಟಗಳಿಗೆ ದಾಸರಾಗದಂತೆ ತಡೆಯುವುದು ಮುಖ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 1,378 ಜನರು ವ್ಯಸನಕ್ಕೆ ದಾಸರಾಗಿದ್ದು, ಕೋಲಾರ ತಾಲ್ಲೂಕಿನಲ್ಲಿ 926 ಪ್ರಕರಣಗಳು ದಾಖಲಾಗಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
262 ಎಚ್‌ಐವಿ ಪ್ರಕರಣ
ಕೋಲಾರ ಜಿಲ್ಲೆಯಲ್ಲಿ ಎಚ್‌ಐವಿ/ಏಡ್ಸ್ ತಪಾಸಣೆ ಸಂಬಂಧಿಸಿದಂತೆ 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 98746 ಜನರನ್ನು ಪರೀಕ್ಷೆಗೆ ಒಳಪಡಿಸಿ ಶೇ 104ರಷ್ಟು ಸಾಧನೆ ಮಾಡಲಾಗಿದೆ. ಒಟ್ಟು 262 ಸಕ್ರಿಯ ಎಫ್‌ಐವಿ ಪ್ರಕರಣಗಳು ದಾಖಲಾಗಿದ್ದು ಪಾಸಿಟಿವ್ ಪ್ರಕರಣಗಳು ಶೇ 0.27ರಷ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.