ಬಂಗಾರಪೇಟೆ: ಪರಿಸರ ಸಂರಕ್ಷಣೆ ಭವಿಷ್ಯ ರಕ್ಷಿಸುವ ಒಂದು ಪ್ರಮುಖ ಹೆಜ್ಜೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಆದರೆ, ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ರಮೇಶ್ ಹೇಳಿದರು.
ತಾಲ್ಲೂಕಿನ ಹುಲಿಬೆಲೆ ಗ್ರಾಮದ ಕೆರೆ ಅಂಗಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುತ್ತಮುತ್ತಲಿನ ಪರಿಸರ ನಿರಂತರವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿ ಜವಾಬ್ದಾರಿ. ಪರಿಸರ ನಾಶದಿಂದ ಅನೇಕ ತೊಂದರೆ ಉಂಟಾಗುತ್ತದೆ. ಎಲ್ಲರೂ ಪರಿಸರ ರಕ್ಷಿಸಬೇಕು ಎಂದರು.
ಮಾನವ ಚಟುವಟಿಕೆಗಳಿಂದ ಪರಿಸರ ವೇಗವಾಗಿ ಹಾಳಾಗುತ್ತಿದೆ. ಕೈಗಾರಿಕೆ, ವಾಹನ ಮತ್ತು ಕೃಷಿಯಿಂದ ಹೊರಸೂಸುವ ವಿಷಕಾರಿ ವಸ್ತುಗಳು ಪರಿಸರ ಕಲುಷಿತಗೊಳಿಸುತ್ತಿದೆ. ಅರಣ್ಯ ನಾಶದಿಂದಾಗಿ ಮಣ್ಣು ಸವೆತ, ಪ್ರವಾಹ ಮತ್ತು ಬರಗಾಲ ಸಮಸ್ಯೆ ಉಂಟಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಪರಿಸರ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಿದರೆ ಪರಿಸರ ನಿರಂತರವಾಗಿ ಮತ್ತು ಆರೋಗ್ಯಕರವಾಗಿ ಇಡಬಹುದು ಎಂದರು.
ಒಕ್ಕೂಟದ ಅಧ್ಯಕ್ಷೆ ಆರತಿ, ವಲಯ ಮೇಲ್ವಿಚಾರಕಿ ಭವ್ಯ, ಗ್ರಾಮ ಪಂಚಾಯಿತಿ ಸದಸ್ಯ ಚಲಪತಿ, ಗ್ರಾಮ ಆಡಳಿತ ಅಧಿಕಾರಿ ಅಂಬರೀಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.