
ಕೋಲಾರ: ಮುಳಬಾಗಿಲು ತಾಲ್ಲೂಕು ಇಒ ಸರ್ವೇಶ್ ಅವರ ಮೇಲೆ ಕಿರುಕುಳ ಆರೋಪ ಮಾಡಿರುವ ಪಿಡಿಒಗಳು ಸಾಮೂಹಿಕ ರಾಜೀನಾಮೆ ನೀಡಲು ಮುಂದಾದ ಪ್ರಹಸನ ನಡೆದಿದೆ.
ಪಿಡಿಒಗಳಿಗೆ ಸರ್ವೇಶ್ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಅವರನ್ನು ಭೇಟಿ ಮಾಡಿ ತಮಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಿದರು.
ಸರ್ವೇಶ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು.
‘ಸರ್ವೇಶ್ ಅವರ ಭ್ರಷ್ಟಾಚಾರ ಖಂಡಿಸಿ ತಾಲ್ಲೂಕು ಕಚೇರಿ ಮುಂದೆ ವಿವಿಧ ಸಂಘಟನೆಗಳು ಸತ್ಯಾಗ್ರಹ ಮಾಡುತ್ತಿವೆ. ಇಷ್ಟೆಲ್ಲಾ ಆರೋಪಗಳು, ಹೋರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಏಳು ವರ್ಷಗಳಿಂದ ಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಸರ್ವೇಶ್ ಪಿಡಿಓ ಹಾಗೂ ಸಿಬ್ಬಂದಿಯಿಂದ ವಸೂಲಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
25ಕ್ಕೂ ಹೆಚ್ಚು ಪಿಡಿಓಗಳು ಸಿಇಒಗೆ ಮನವಿ ಸಲ್ಲಿಸಿದರು. ಮುಳಬಾಗಿಲು ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್ ಬಳಿಯೂ ಪಿಡಿಒಗಳು ಅಳಲು ಹೇಳಿಕೊಂಡಿದ್ದಾರೆ. ಸಂಜೆಯೊಳಗೆ ಇಒ ಸರ್ವೇಶ್ ವರ್ಗಾವಣೆ ಆಗದಿದ್ದರೆ ಪಿಡಿಒಗಳೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.