ADVERTISEMENT

ಕೃಷಿ ಉತ್ಪನ್ನಗಳಿಗೆ ಪ್ರತ್ಯೇಕ ಮಳಿಗೆ ಸ್ಥಾಪಿಸಿ: ಶಾಸಕ ಕೆ.ಆರ್‌. ರಮೇಶ್‌ಕುಮಾರ್

ಡಿಸಿಸಿ ಬ್ಯಾಂಕ್‌ಗೆ ಶಾಸಕ ಕೆ.ಆರ್‌. ರಮೇಶ್‌ಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:12 IST
Last Updated 12 ಏಪ್ರಿಲ್ 2021, 5:12 IST
ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ರಮೇಶ್‌ಕುಮಾರ್‌ ಮತ್ತು ಕೆ. ಶ್ರೀನಿವಾಸಗೌಡ ಮಹಿಳೆಯರಿಗೆ ಸಾಲ ವಿತರಿಸಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇದ್ದರು
ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ರಮೇಶ್‌ಕುಮಾರ್‌ ಮತ್ತು ಕೆ. ಶ್ರೀನಿವಾಸಗೌಡ ಮಹಿಳೆಯರಿಗೆ ಸಾಲ ವಿತರಿಸಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇದ್ದರು   

ಕೋಲಾರ: ‘ರೈತರು ಬೆಳೆದ ಬೆಳೆ ಹಾಳಾಗದಂತೆ ಕಾಪಾಡಲು ಶಿಥಲೀಕರಣ ಘಟಕಗಳನ್ನು ಪ್ರಾರಂಭಿಸಲು ಡಿಸಿಸಿ ಬ್ಯಾಂಕ್‌ ಮುಂದಾಗಬೇಕು’ ಎಂದು ಶಾಸಕ ಕೆ.ಆರ್. ರಮೇಶ್‌ ಕುಮಾರ್ ಹೇಳಿದರು.

ನಗರ ಹೊರವಲಯದ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್‌ನಿಂದ ₹ 5 ಕೋಟಿ ಸಾಲ ವಿತರಿಸಿ ಮಾತನಾಡಿದರು.

ಬಿತ್ತನೆಬೀಜದಿಂದ ಹಿಡಿದು ಕೀಟನಾಶಕ, ಗೊಬ್ಬರ, ಕೃಷಿಗೆ ಸಂಬಂಧಿಸಿದ ಎಲ್ಲಾ ಸಲಕರಣೆಗಳು ಒಂದೇ ಸೂರಿನಡಿ ಸಿಗಬೇಕು. ನೇರವಾಗಿ ಕಂಪನಿಗಳೊಂದಿಗೆ ಸಂಪರ್ಕ ಪಡೆದು ಖಾಸಗಿಯವರಿಗಿಂತ ಕಡಿಮೆ ಬೆಲೆಗೆ ರೈತರಿಗೆ ಸಿಗುವಂತೆ ಮಾಡಬೇಕು. ರೈತರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಬೇಕು. ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯ ಎಲ್ಲಾ ಸಲಕರಣೆಗಳು ಒಂದೆಡೆ ಸಿಗುವಂತೆ ಬೃಹತ್ ಮಳಿಗೆ ಆರಂಭಿಸಬೇಕು. ಖಾಸಗಿಯವರಿಂದ ರೈತರಿಗಾಗುತ್ತಿರುವ ವಂಚನೆ ತಪ್ಪಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಅಣ್ಣಿಹಳ್ಳಿ ಕೃಷ್ಣಪ್ಪ ಅವರ ನೆನಪಿನಲ್ಲಿ ಮುಂದಿನ ಯುಗಾದಿ ಒಳಗಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು, ಯುವಕರಿಗೆ ವಿವಿಧ ಉದ್ಯೋಗಗಳಿಗೆ ಅಗತ್ಯವಾದ ಕೌಶಲ ತರಬೇತಿ ಕೇಂದ್ರ ಪ‍್ರಾರಂಭಿಸಬೇಕು. ಅವರ ಅವಧಿಯಲ್ಲಿ ಸೊಸೈಟಿಗೆ ಒದಗಿಸಿರುವ 4 ಎಕರೆ ಜಾಗದಲ್ಲಿ ನಿರ್ಮಿಸಬೇಕು ಎಂದು ಹೇಳಿದರು.

ಶೂಟ್, ಕಾರು, ಇಂಗ್ಲಿಷ್ ಬಲ್ಲವರಿಗೆ, ಟೋಪಿ ಹಾಕುವವರಿಗೆ ಕೋಟಿ ಕೋಟಿ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ನೀಡುತ್ತವೆ. ಅಂತಹ ಬ್ಯಾಂಕ್‌ಗಳಲ್ಲಿ ಸರ್ಕಾರದ ಇಲಾಖೆಗಳು ಹಣ ಇಡುತ್ತವೆ. ಸಣ್ಣ ರೈತರ ಬದುಕು ಹಸನು ಮಾಡುವ ಸಹಕಾರ ವ್ಯವಸ್ಥೆಯನ್ನು ನಂಬುವುದಿಲ್ಲ ಎಂದರು.

ಶಾಸಕ ಕೆ. ಶ್ರೀನಿವಾಸಗೌಡ, ಅಣ್ಣಿಹಳ್ಳಿ ಸೊಸೈಟಿಯಿಂದ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆವರೆಗೂ ಬೆಳೆಯಲು ಅಣ್ಣಿಹಳ್ಳಿ ಕೃಷ್ಣಪ್ಪ ಅವರು ಸಹಕಾರ ನೀಡಿದ್ದಾರೆ. ಸಹಕಾರ ಸಂಘಗಳು ಅವರ ಆದರ್ಶ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ‘10 ವರ್ಷಗಳ ಹಿಂದೆ ದಿವಾಳಿಯಾಗಿದ್ದ ಸೊಸೈಟಿ ಇಂದು ₹ 45 ಕೋಟಿ ಸಾಲ ನೀಡುವ ಶಕ್ತಿಗಳಿಸಿದೆ. ಅದೇ ರೀತಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ನಂ.1 ಆಗಿದೆ. ಇದಕ್ಕೆ ಕಾರಣರಾದ ಬ್ಯಾಲಹಳ್ಳಿ ಗೋವಿಂದಗೌಡರ ಕಾರ್ಯ ಶ್ಲಾಘನೀಯ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್. ಅನಿಲ್‍ಕುಮಾರ್ ಮಾತನಾಡಿದರು. ನಿರ್ದೇಶಕ ಕೆ.ವಿ. ದಯಾನಂದ್, ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ, ಚಂದ್ರಶೇಖರ್, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ, ಮುಖಂಡರಾದ ಅಗ್ನಿಹಳ್ಳಿ ನಾಗರಾಜ್, ನಿರ್ದೇಶಕರಾದ ಮುನಿವೆಂಕಟಪ್ಪ, ವಿ. ಬ್ಯಾಟಪ್ಪ, ವಿ. ಸುಬ್ರಮಣಿ, ಲಕ್ಷ್ಮಮ್ಮ, ಸಿಇಒ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.