ADVERTISEMENT

ವಲಗಮಾದಿ ಬೆಟ್ಟದಲ್ಲಿ ಯುರೋಪ್‌ ಹಕ್ಕಿ ಪ್ರತ್ಯಕ್ಷ

ಬೀ ಈಟರ್‌ ನಂತರ ಬಿಳಿ ಕೊರಳಿನ ಹಕ್ಕಿ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:08 IST
Last Updated 29 ಅಕ್ಟೋಬರ್ 2025, 5:08 IST
ಓಲ್ಡ್‌ ವರ್ಡ್‌ ವಾಬ್ಲರ್‌ ಹಕ್ಕಿ
ಓಲ್ಡ್‌ ವರ್ಡ್‌ ವಾಬ್ಲರ್‌ ಹಕ್ಕಿ   

ಕೆಜಿಎಫ್‌: ನಗರದ ಹೊರವಲಯದ ವಲಗಮಾದಿ ಬೆಟ್ಟಕ್ಕೆ ಯೂರೋಪ್‌ನಿಂದ ಬರುವ ಬೀ ಈಟರ್‌ ನಂತರ ಮತ್ತೊಂದು ಓಲ್ಡ್‌ ವರ್ಡ್ ವಾಬ್ಲರ್‌ ಕುಟುಂಬಕ್ಕೆ ಸೇರಿದ ಬಿಳಿ ಕೊರಳಿನ ಹಕ್ಕಿ ಕಾಲಿಟ್ಟಿದೆ.

ಸುಮಾರು ಒಂದು ತಿಂಗಳಿಂದ ಬೆಟ್ಟದ ಆಸುಪಾಸಿನ ಮರಗಳಲ್ಲಿ ಕುಳಿತು ಬೇಟೆಯಾಡುತ್ತಿರುವ ಹಕ್ಕಿಯನ್ನು ಹವ್ಯಾಸಿ ಛಾಯಾಚಿತ್ರಗಾರ ಡಾ. ಮೋಹನಕೃಷ್ಣ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೂರೋಪ್‌ನಿಂದ ಬರುವ ಬೀ ಈಟರ್‌ಗಳು ಚಳಿಗಾಲದ ಸಮಯದಲ್ಲಿ ಇಲ್ಲಿನ ನೀಲಗಿರಿ ಮರಗಳಲ್ಲಿ ಮತ್ತು ವಿದ್ಯುತ್‌ ಕಂಬಗಳ ಮೇಲೆ ಕುಳಿತಿರುವುದು ಕಂಡು ಬಂದಿತ್ತು. ಅದನ್ನು ನೋಡಲು ಮತ್ತು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ವಿವಿಧ ರಾಜ್ಯಗಳಿಂದ ಹವ್ಯಾಸಿ ಛಾಯಾ ಚಿತ್ರಗಾರರು ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಯೂರೋಪ್‌ ಖಂಡದ ಓಲ್ಡ್‌ ವರ್ಡ್ ವಾಬ್ಲರ್‌ ಕುಟುಂಬಕ್ಕೆ ಸೇರಿದ ಬಿಳಿ ಕೊರಳಿನ ಹಕ್ಕಿ ಈಗ ಕಾಣಿಸಿಕೊಂಡಿದೆ.

ಯೂರೋಪ್‌ ಮತ್ತು ಮಧ್ಯ ಏಷ್ಯಾದಲ್ಲಿ ಹುಟ್ಟುವ ಈ ಹಕ್ಕಿಗಳು ಚಳಿಗಾಲದಲ್ಲಿ ಆಫ್ರಿಕಾ, ಅರೇಬಿಯಾ ಮತ್ತು ಭಾರತದತ್ತ ಮುಖ ಮಾಡುತ್ತವೆ. ಜನ್ಮ ಸ್ಥಳದಲ್ಲಿರುವ ಅತಿ ಶೀತ ವಾತಾವರಣವನ್ನು ತಪ್ಪಿಸಲು ಹದವಾದ ಶೀತ ಇರುವ ಪ್ರದೇಶಕ್ಕೆ ವಲಸೆ ಬರುತ್ತವೆ. ಅದೇ ರೀತಿ ಈ ಹಕ್ಕಿ ಕೂಡ ಭಾರತಕ್ಕೆ ಬಂದು, ಇಲ್ಲಿನ ವಲಗಮಾದಿ ಗುಡ್ಡದ ಬಳಿ ಠಿಕಾಣಿ ಹಾಕಿದೆ ಎಂದು ಡಾ.ಮೋಹನಕೃಷ್ಣ ಮಾಹಿತಿ ನೀಡಿದ್ದಾರೆ.

ADVERTISEMENT

ಕೇವಲ 11.5 ರಿಂದ 12.5 ಸೆಂ.ಮೀ. ಉದ್ದ ಮತ್ತು 11 ರಿಂದ 16 ಗ್ರಾಂ ತೂಕ ಇರುವ ಹಕ್ಕಿಗಳು ಬರೀಗಣ್ಣಿಗೆ ಗೋಚರವಾಗುವುದು ಕಷ್ಟ. ಅತ್ಯಾಧುನಿಕ ಕ್ಯಾಮೆರಾಗಳ ಮೂಲಕವೇ ಅದನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಬೀ ಈಟರ್‌ಗಳ ರೀತಿಯಲ್ಲಿಯೇ ಜೇನು ಹುಳು, ಸಣ್ಣ ಕ್ರಿಮಿಕೀಟಗಳು ಮತ್ತು ಹಣ್ಣುಗಳು ಇದರ ಆಹಾರವಾಗಿವೆ. ಬೀ ಈಟರ್‌ಗಳು ಗುಂಪು ಗುಂಪಾಗಿ ಕಂಡರೆ ಇದು ಒಂದೊಂದೇ ಕಾಣಿಸಿಕೊಳ್ಳುತ್ತವೆ.

ವಲಗಮಾದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವೈವಿಧ್ಯಮಯ ಹಕ್ಕಿಗಳು ಕಂಡು ಬರುತ್ತಿದ್ದು ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು.
ಡಾ.ಮೋಹನಕೃಷ್ಣ ಹವ್ಯಾಸಿ ಛಾಯಾಗ್ರಾಹಕ
ಡಾ.ಮೋಹನಕೃಷ್ಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.