ADVERTISEMENT

ಜನರ ಕಷ್ಟ ಅರಿತು ಸೌಲಭ್ಯ ಕಲ್ಪಿಸಿ

ಗ್ರಾ.ಪಂ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:22 IST
Last Updated 24 ಮೇ 2020, 13:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ‘ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ಜನರ ಕಷ್ಟ ಅರಿತು ಎಲ್ಲಾ ಸೌಲಭ್ಯ ಕಲ್ಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕಿವಿಮಾತು ಹೇಳಿದರು.

ತಾಲ್ಲೂಕಿನ ಮುದುವತ್ತಿ ಗ್ರಾಮದಲ್ಲಿ ಭಾನುವಾರ ರಾಜೀವ್‌ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಿಲ್ಲಿ ಜನರಿಗೆ ಸೋಂಕಿನ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾ.ಪಂಗಳು ನಿರ್ಣಾಯಕ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಗ್ರಾ.ಪಂ ಚುನಾಯಿತ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಹಲವು ಕಾಮಗಾರಿ ನಡೆಸಬಹುದು. ರಸ್ತೆ, ಚರಂಡಿ ಹಾಗೂ ಕೆರೆಗಳ ಅಭಿವೃದ್ಧಿಯ ಜತೆಗೆ ಕೃಷಿ ಚಟುವಟಿಕೆಗಳಿಗೂ ಈ ಯೋಜನೆ ಸಹಕಾರಿಯಾಗಿದೆ’ ಎಂದರು.

ADVERTISEMENT

‘ಬೇಸಿಗೆ ಕಾರಣಕ್ಕೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್‌ ಅಥವಾ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರಿನ ಸೌಲಭ್ಯಕ್ಕೆ ಅನುದಾನದ ಕೊರತೆಯಿಲ್ಲ’ ಎಂದು ತಿಳಿಸಿದರು.

‘ಗ್ರಾ.ಪಂ ಚುನಾಯಿತ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಶ್ರಮದಿಂದಾಗಿ ಗ್ರಾ.ಪಂ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಈ ಕಟ್ಟಡವು ಜಿಲ್ಲೆಯಲ್ಲೇ ಮಾದರಿಯಾಗಿದೆ. ತಮ್ಮ ಅನುದಾನದಲ್ಲಿ ₹ 5 ಲಕ್ಷ ನೀಡುವ ಮೂಲಕ ಗ್ರಾ.ಪಂ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ನೆರವಾಗುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಅರುಣ್‌ಪ್ರಸಾದ್ ಭರವಸೆ ನೀಡಿದರು.

ಗ್ರಾಮ ಸೌಧಗಳಾಗಬೇಕು: ‘ಗ್ರಾ.ಪಂಗಳು ಗ್ರಾಮ ಸೌಧಗಳಾಗಬೇಕಿದ್ದು, ಈ ನಿಟ್ಟಿನಲ್ಲಿ ಸದಸ್ಯರಿಗೆ ಕೆಡಿಪಿ ಸಭೆ ಸೇರಿದಂತೆ ವಿವಿಧ ಅಧಿಕಾರ ನೀಡಲಾಗಿದೆ. ಸದಸ್ಯರು ಆಯಾ ಭಾಗದ ಶಾಸಕರಿದ್ದಂತೆ ಮತ್ತು ಅಧ್ಯಕ್ಷರು ಗ್ರಾ.ಪಂ ವ್ಯಾಪ್ತಿಗೆ ಮುಖ್ಯಮಂತ್ರಿಯಿದ್ದಂತೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಭಿಪ್ರಾಯಪಟ್ಟರು.

‘ಸುಮಾರು 10 ಸಾವಿರ ಜನಸಂಖ್ಯೆಯಿರುವ ವ್ಯಾಪ್ತಿಯಲ್ಲಿ ಗ್ರಾ.ಪಂಗೆ ಉತ್ತಮ ಕಟ್ಟಡವಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ 6 ಗುಂಟೆ ಜಮೀನು ಪಡೆದು ವಿವಿಧ ಅನುದಾನ ಕ್ರೂಢೀಕರಿಸಿ ₹ 45 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇನ್ನೂ ₹ 10 ಲಕ್ಷ ಮೊತ್ತದ ಕಾಮಗಾರಿ ಬಾಕಿಯಿದ್ದು, ಅನುದಾನ ಬಂದ ಬಳಿಕ ಪೂರ್ಣಗೊಳಿಸುತ್ತೇವೆ’ ಎಂದು ಮುದುವತ್ತಿ ಗ್ರಾ.ಪಂ ಪಿಡಿಒ ಮಹೇಶ್‌ಕುಮಾರ್ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮುದುವತ್ತಿ ಗ್ರಾ.ಪಂ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಎಸ್.ಆರ್.ರಮೇಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.