ಮುಳಬಾಗಿಲ: ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಟೊಮೆಟೊ ಹಾಗೂ ಮಾವು ಬೆಳೆಗಾರರ ರಕ್ಷಣೆಗೆ ಪ್ರತಿ ಕೆ.ಜಿಗೆ ₹15 ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘವು ಬುಧವಾರ ಪ್ರತಿಭಟನೆ ನಡೆಸಿತು.
ನಗರದ ಕೆಇಬಿ ವೃತ್ತದಲ್ಲಿ ಟೊಮೆಟೊ ಹಾಗೂ ಮಾವಿನ ಫಸಲನ್ನು ರಸ್ತೆ ಮೇಲೆ ರಾಶಿ ಹಾಕಿ ನಂತರ ಜನಸಾಮಾನ್ಯರಿಗೆ ಉಚಿತವಾಗಿ ಹಂಚುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಆಂಧ್ರಪ್ರದೇಶದಲ್ಲಿ ಮಾವಿಗೆ ₹12 ಸಾವಿರ, ಟೊಮೆಟೊಗೆ ₹10 ಸಾವಿರ ಬೆಂಬಲ ಘೋಷಣೆ ಮಾಡುವ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿದೆ. ಈ ಮೂಲಕ ಆ ರಾಜ್ಯ ಸರ್ಕಾರವು ರೈತರ ಪರ ನಿಂತಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವೂ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತಪರವಾಗಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಮಾವು ಮತ್ತು ಟೊಮೆಟೊ ಬೆಳೆಗಾರರ ತೀರಾ ಸಂಕಷ್ಟದಲ್ಲಿದ್ದಾರೆ. ಐದು ವರ್ಷಗಳಿಂದ ರೋಗಗಳ ನಿಯಂತ್ರಣವಿಲ್ಲದೆ ನಷ್ಟ ಅನುಭವಿಸುತ್ತಿದ್ದ ಬೆಳೆಗಾರರು ಈ ವರ್ಷ ಉತ್ತಮ ಬೆಳೆಯಾಗಿ ಫಸಲು ಸಹ ಬಂದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಒಂದು ಬಾಕ್ಸ್‌ಗೆ ₹100ನಿಂದ ₹10ಕ್ಕೆ ಕುಸಿದಿದೆ. ಇದರಿಂದ ರೈತರು ಮಾರುಕಟ್ಟೆಗೆ ಸಾಗಿಸುವ ವೆಚ್ಚವನ್ನೂ ಭರಿಸಲಾಗುತ್ತಿಲ್ಲ. ಹೀಗಾಗಿ, ಸರ್ಕಾರ ರೈತರ ಪರ ನಿಲ್ಲಬೇಕು ಎಂದರು.
ಯಲುವಹಳ್ಳಿ ಪ್ರಭಾಕರ್, ಪಾರುಕ್‍ಪಾಷ, ಬಂಗಾರಿ ಮಂಜು, ಅಂಬ್ಲಿಕಲ್ ಮಂಜುನಾಥ್, ರಾಜೇಶ್, ಭಾಸ್ಕರ್, ಸುನಿಲ್‍ಕುಮಾರ್, ಜುಬೇರ್‌ಪಾಷ, ಧರ್ಮ, ನಾಗೇಶ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.