ADVERTISEMENT

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ

ಜ. 25ರಂದು ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:30 IST
Last Updated 21 ಜನವರಿ 2021, 2:30 IST
ಬಂಗಾರಪೇಟೆ ತಾಲ್ಲೂಕಿನ ಗಾಲ್ಫ್ ಕ್ರೀಡಾಂಗಣ ಕುರಿತು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ಪದಾಧಿಕಾರಿಗಳು
ಬಂಗಾರಪೇಟೆ ತಾಲ್ಲೂಕಿನ ಗಾಲ್ಫ್ ಕ್ರೀಡಾಂಗಣ ಕುರಿತು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ಪದಾಧಿಕಾರಿಗಳು   

ಬಂಗಾರಪೇಟೆ: ಗಾಲ್ಫ್‌ನಲ್ಲಿನ ಸರ್ಕಾರಿ ಜಮೀನು, ಕೆರೆ ಹಾಗೂ ಪೊಲೀಸ್ ಠಾಣೆಗೆ ಮೀಸಲಿಟ್ಟಿರುವ ಜಮೀನು ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಜ.25 ರಂದು ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಹಂಚಾಳ ಬಳಿ ನಿರ್ಮಿಸಿರುವ ಗಾಲ್ಫ್ ಕ್ರೀಡಾಂಗಣಕ್ಕೆ ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ದಾಖಲೆ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹಂಚಾಳ ಬಳಿ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 36 ರಲ್ಲಿನ 35 ಗುಂಟೆ ಗುಂಡು ತೋಪಿಗೆ ಸೇರಿದ ಜಾಗವನ್ನು ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಆದರೆ ಅದನ್ನು ಪ್ರಭಾವಿ ರಾಜಕಾರಣಿಗಳು ಒತ್ತುವರಿ ಮಾಡಿ ದೇಗುಲ ನಿರ್ಮಿಸಿದ್ದಾರೆ. ಸರ್ಕಾರಿ ಜಮೀನು ರಕ್ಷಣೆಗೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.

ADVERTISEMENT

ವಿಭಾಗೀಯ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಂದ್‌ಪಾಷ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ತಾಲ್ಲೂಕು ಅಧ್ಯಕ್ಷ ಚಲಪತಿ, ರಾಜ್ಯ ಸಂಚಾಲಕ ಅನಿಲ್, ಗೌಸ್‌ಪಾಷ, ಬಾಬಾಜಾನ್, ಜಮೀರ್ ಪಾಷ, ಜಾವೀದ್, ಮಹಮದ್ ಶೊಯೀಬ್, ಮಂಜುನಾಥ್, ಮರಗಲ್ ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.