ADVERTISEMENT

ಆರ್ಥಿಕ ಸಾಕ್ಷರತಾ ಸಪ್ತಾಹ | ಡಿಜಿಟಲ್‌ ವಂಚನೆ; ಗ್ರಾಹಕರಿಗೆ ಎಚ್ಚರಿಕೆ

ಸುರಕ್ಷಿತ ಬ್ಯಾಂಕಿಂಗ್ ನಿಯಮ ಪಾಲಿಸಲು ಬ್ಯಾಂಕ್‌ ಅಧಿಕಾರಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:07 IST
Last Updated 10 ಫೆಬ್ರುವರಿ 2026, 5:07 IST
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಸೋಮವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿದರು
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಸೋಮವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿದರು   

ಕೋಲಾರ: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಫೆ.9ರಿಂದ 13ರವರೆಗೆ ಜಿಲ್ಲೆಯಾದ್ಯಂತ ‘ಆರ್ಥಿಕ ಸಾಕ್ಷರತಾ ಸಪ್ತಾಹ’ ಹಮ್ಮಿಕೊಂಡಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಜಿಲ್ಲಾ ಲೀಡ್‌ ಬ್ಯಾಂಕ್‌ನಿಂದ ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ತಾಲ್ಲೂಕಿನ ನರಸಾಪುರ ಶಾಖೆಯಿಂದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕೋಲಾರ ಪ್ರಾದೇಶಿಕ ವ್ಯವಸ್ಥಾಪಕ ಎಂ.ಇ.ವಿನಯ ಮಾತನಾಡಿ, ‘ಹಳ್ಳಿಗರು, ಅಮಾಯಕರನ್ನು ಓಟಿಪಿ ಕೇಳಿ ಹಣ ಲಪಟಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಯಾರಿಗೂ ಓಟಿಪಿ ಹೇಳಬೇಡಿ, ಬ್ಯಾಂಕ್‌ನವರು ಯಾವುದೇ ಓಟಿಪಿ ಕೇಳಲ್ಲ. ಏನಾದರೂ ‌ಸಮಸ್ಯೆ‌ ಇದ್ದರೆ ನಾವೇ ಬ್ಯಾಂಕ್‌ಗೆ ಕರೆದು ಮಾಹಿತಿ ಪಡೆಯುತ್ತೇವೆ. ತಮ್ಮ ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌, ಇ–ಮೇಲ್‌ಗೆ ಬರುವ ಅಪರಿಚಿತ ಲಿಂಕ್‌ಗಳನ್ನು ತೆರೆಯಬೇಡಿ. ಅಪರಿಚಿತ ಕರೆಗಳ ಬಗ್ಗೆಯೂ ಎಚ್ಚರವಿರಲಿ. ನಿಮ್ಮ ಖಾತೆ ನಿಮ್ಮ ಹಕ್ಕು. ಅನಾಮಧೇಯರಿಗೆ ಯಾವುದೇ ಮಾಹಿತಿ‌ ನೀಡಬೇಡಿ’ ಎಂದರು.

ಬ್ಯಾಂಕ್‌ ಸಾಲ‌ ವಿಚಾರದಲ್ಲಿ ‌ಶ್ಯೂರಿಟಿ (ಜಾಮೀನು) ನೀಡುವಾಗ ಎಚ್ಚರಿಕೆಯಿಂದ ‌ಇರಿ. ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಕಾನೂನು ‌ಪ್ರಕಾರ‌ ಶ್ಯೂರಿಟಿ ಹಾಕಿದವರೇ ಜವಾಬ್ದಾರಿ ಆಗುತ್ತಾರೆ. ಸಿಬಿಲ್ ಸ್ಕೋರ್‌ ಕಡಿಮೆ ‌ಆದರೆ ಮುಂದೆ ಸಾಲ ಸಿಗಲ್ಲ. ಈಗ ರೈತರಿಗೂ‌ ಸಿಬಿಲ್ ಬಂದಿದೆ. ಸಾಲಗಾರನ ಗುಣಮಟ್ಟ ಪರೀಕ್ಷಿಸಲು ಸಿಬಿಲ್ ಸ್ಕೋರ್‌ ಎಂಬುದು ಇರುತ್ತದೆ ಎಂದು ಹೇಳಿದರು.

ADVERTISEMENT

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹಾದೇವ್‌ ಜೋಶಿ ಮಾತನಾಡಿ, ‘ಸುರಕ್ಷಿತ ಬ್ಯಾಂಕಿಂಗ್‌ ಉದ್ದೇಶಕ್ಕೆ ಕೆವೈಸಿ (ನೋ ಯುವರ್‌ ಕಸ್ಟಮರ್‌) ದಾಖಲೆ ನೀಡಿ ನವೀಕರಿಸಿಕೊಂಡು ತಮ್ಮ ಖಾತೆ‌ಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಿ.‌ ಸಿಕೆವೈಸಿಯಲ್ಲೂ ನೋಂದಣಿ ಮಾಡಿಕೊಳ್ಳಬಹುದು. ಕೆವೈಸಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕಾಲಕ್ಕೆ ಬ್ಯಾಂಕ್‌ಗೆ ಕೊಡಬೇಕು’ ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನರಸಾಪುರ ಶಾಖೆ ವ್ಯವಸ್ಥಾಪಕ ದ್ವಾರಕನಾಥ್ ಮಾತನಾಡಿ, ‘ಹಣಕಾಸು ವಿಚಾರದಲ್ಲಿ ಗ್ರಾಹಕರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಕೆಲವರು ‌ವಂಚಿಸಲು ಕಾಯುತ್ತಿರುತ್ತಾರೆ. ಆನ್‌ಲೈನ್‌ ವಂಚನೆಗಳ ಸಂಬಂಧ ಗೋಲ್ಡನ್ ಅವರ್‌ನೊಳಗೆ‌ ಸೈಬರ್‌ ಕ್ರೈಂನ 1930 ಸಂಖ್ಯೆಗೆ ಕರೆ‌ ಮಾಡಿದರೆ ಖಾತೆಯಿಂದ ವಂಚಕರ ಪಾಲಾದ ಹಣ ವಾಪಸ್ ಬರುವ ಸಾಧ್ಯತೆಗಳು ಇರುತ್ತವೆ’ ಎಂದು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ, ಎಪಿವೈ, ಪಿಎಂಜೆಡಿವೈ ಬಗ್ಗೆ ಮಾಹಿತಿ ನೀಡಿದರು. ತಮ್ಮ ಶಾಖೆ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಮೂವರು ಮೃತಪಟ್ಟಿದ್ದು, ಕ್ಲೈಮ್ ಸೆಟ್ಲ್ ಆಗಿದೆ ಎಂದರು.

ಆರ್ಥಿಕ, ಡಿಜಿಟಲ್ ಸಾಕ್ಷರತೆ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಹಾಗೂ ಸುರಕ್ಷಿತ ಬ್ಯಾಂಕಿಂಗ್‌ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಐದು ದಿನ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಆರ್ಥಿಕ ಸಾಕ್ಷರತಾ ಸಪ್ತಾಹದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

ಗ್ರಾಮ ಪಂಚಾಯತಿ ಪಿಡಿಒ ಮುನಿರಾಜು, ಕುಮಾರ್, ಭಾನುಪ್ರಕಾಶ್, ವಿಶಾಲಾಕ್ಷಿ, ನರಸಾಪುರ ಶಾಖೆ ಬ್ಯಾಂಕ್‌ ಸಿಬ್ಬಂದಿ, ಗ್ರಾಹಕರು, ಗ್ರಾಮಸ್ಥರು ಇದ್ದರು.

ಮನಿ ಮ್ಯೂಲ್‌ ಬಗ್ಗೆ ಎಚ್ಚರಿಕೆ

ತೆರಿಗೆ ಪಾವತಿಯಿಂದ ಪಾರಾಗಲು ಹಾಗೂ ಕಾನೂನು ಬಾಹಿರ ವ್ಯವಹಾರಗಳಿಗೆ ಕೆಲವರು ಅಮಾಯಕ ಗ್ರಾಹಕರ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು (ಮನಿ ಮ್ಯೂಲ್‌) ನಡೆಯುತ್ತಿವೆ. ಅಮಾಯಕರಿಗೆ ಆಮಿಷವೊಡ್ಡಿ ಅವರ ಖಾತೆಗಳಿಗೆ ಹಣ ಹಾಕುತ್ತಾರೆ ನಂತರ ಆ ಹಣ ತೆಗೆದು ಅಕ್ರಮ ಚಟುವಟಿಕೆಗೆ ಬಳಸುತ್ತಾರೆ. ಆಗ ತಾವೇ ಹೊಣೆಗಾರರಾಗುತ್ತೀರಿ ತಮಗೆ ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೇರೆ ಯಾರ ಜೊತೆಯೂ ಖಾತೆ ಹಂಚಿಕೊಳ್ಳಬೇಡಿ. ಹಣದ ಆಮಿಷಕ್ಕೂ ಕಮಿಷನ್‌ ಆಮಿಷಕ್ಕೋ ಒಳಗಾಗಬೇಡಿ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹಾದೇವ್‌ ಎಸ್.ಜೋಶಿ ಕಿವಿಮಾತು ಹೇಳಿದರು.

ಖಾತೆಗೆ ಹಣ ಹಾಕಿ ವಂಚನೆ

ಕೆಲ ವಂಚಕರು ತಮ್ಮ ಖಾತೆಗೆ ಸ್ವಲ್ಪ ಹಣ ಹಾಕುತ್ತಾರೆ. ಹಣ ಹಾಕಿ ಲಿಂಕ್‌ ಕಳಿಸುತ್ತಾರೆ. ಹಣ ಎಲ್ಲಿಂದ ಬಂತು ಎಂದು ಪರಿಶೀಲಿಸಲು ತಾವೇನಾದರೂ ಪಾಸ್‌ವರ್ಡ್‌ ನಮೂದಿಸಿ ತಮ್ಮ ಆನ್‌ಲೈನ್‌ ಖಾತೆ ತೆರೆದರೆ ವಂಚಕರು ಹಣ ದೋಚುತ್ತಾರೆ. ₹ 2 ಸಾವಿರ ಹಾಕಿ ₹ 10 ಸಾವಿರ ಕಿತ್ತುಕೊಳ್ಳುತ್ತಾರೆ. ಹೀಗಾಗಿ ಅನಾಮಧೇಯ ಖಾತೆಗಳಿಂದ ತಮ್ಮ ಖಾತೆಗೆ ಹಣ ಬಂದಾಗ ಪರಿಶೀಲಿಸಲು ಹೋಗಬೇಡಿ. ಬದಲಾಗಿ ಎರಡು ಬಾರಿ ತಪ್ಪು ಪಾಸ್‌ವರ್ಡ್‌ ನಮೂದಿಸಿ ಸ್ವಲ್ಪ ಸಮಯ ‌ಬಿಟ್ಟು ಪರಿಶೀಲಿಸಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕೋಲಾರ ಪ್ರಾದೇಶಿಕ ವ್ಯವಸ್ಥಾಪಕ ಎಂ.ಇ.ವಿನಯ ಸಲಹೆ ನಿಡಿದರು. ಡಿಜಿಟಲ್‌ ಅರೆಸ್ಟ್‌ ಬಗ್ಗೆಯೂ ಎಚ್ಚರವಿರಲಿ. ತಮ್ಮ ಖಾತೆ ಸುರಕ್ಷತೆ ನಮ್ಮ ಹೊಣೆ. ಜೊತೆಗೆ ತಮ್ಮ ಜವಾಬ್ದಾರಿಯೂ ಇದೆ. ಖಾತೆ ಗೋಪ್ಯತೆ ಕಾಯ್ದುಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.