ADVERTISEMENT

ಲಾಭ ಹೆಚ್ಚಳ ಮಾರ್ಗ ಕಂಡುಕೊಳ್ಳಿ: ಸ್ತ್ರೀಶಕ್ತಿ ಸಂಘಗಳಿಗೆ ನಬಾರ್ಡ್‌ ಸಿಜಿಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 13:40 IST
Last Updated 17 ಸೆಪ್ಟೆಂಬರ್ 2019, 13:40 IST
ಕೋಲಾರ ತಾಲ್ಲೂಕಿನ ಚಿನ್ನಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರ ಸಭೆಯಲ್ಲಿ ನಬಾರ್ಡ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ವಿ.ಎಸ್.ಸೂರ್ಯಕುಮಾರ್ ಮಾತನಾಡಿದರು.
ಕೋಲಾರ ತಾಲ್ಲೂಕಿನ ಚಿನ್ನಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರ ಸಭೆಯಲ್ಲಿ ನಬಾರ್ಡ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ವಿ.ಎಸ್.ಸೂರ್ಯಕುಮಾರ್ ಮಾತನಾಡಿದರು.   

ಕೋಲಾರ: ತಾಲ್ಲೂಕಿನ ಚಿನ್ನಾಪುರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್‌) ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಪಿ.ವಿ.ಎಸ್.ಸೂರ್ಯಕುಮಾರ್ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಚಟುವಟಿಕೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಕೆಲ ಸದಸ್ಯರ ಮನೆಗೆ ಭೇಟಿ ನೀಡಿದ ಸೂರ್ಯಕುಮಾರ್‌ ಹಸು ಖರೀದಿ ಬಗ್ಗೆ ಮಾಹಿತಿ ಪಡೆದರು. ‘ಆರ್ಥಿಕವಾಗಿ ಸಬಲರಾಗಲು ಏನು ಕ್ರಮ ಕೈಗೊಂಡಿದ್ದೀರಿ ಹಾಗೂ ಸಂಘ ನಿರ್ವಹಣೆ ಹೇಗೆ ಮಾಡುತ್ತೀರಿ?’ ಎಂದು ಸದಸ್ಯರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಸದಸ್ಯೆ ನಾರಾಯಣಮ್ಮ, ‘ಮೊದಲು ಸಂಘದ ಮೂಲಕ ಮಹಿಳೆಯರಿಗೆ ಸಾಲ ಸಿಗುತ್ತದೆ ಎಂಬ ಅರಿವಿರಲಿಲ್ಲ. ಸಂಘದಿಂದ ಸಾಲ ಪಡೆದವರು ಮಾಹಿತಿ ನೀಡಿದ ನಂತರ ಸಂಘ ರಚಿಸಿಕೊಂಡು 6 ತಿಂಗಳು ನಡೆಸಿದೆವು. ಬಳಿಕ ಸಾಲ ದೊರೆಯಿತು’ ಎಂದು ಹೇಳಿದರು.

ADVERTISEMENT

‘ಸಾಲಕ್ಕಾಗಿ ಸಾಕಷ್ಟು ವಾಣಿಜ್ಯ ಬ್ಯಾಂಕ್‌ಗಳಿಗೆ ಅಲೆದಾಡಿದ್ದೇವೆ. ಡಿಸಿಸಿ ಬ್ಯಾಂಕ್‌ ಸಂಘದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಿದ ₹ 50 ಸಾವಿರ ಸಾಲದ ಹಣದಲ್ಲಿ ಹಸು ಖರೀದಿಸಿದೆ. ಡೇರಿಗೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದೇನೆ. ಸಾಲದ ಹಣ ಸದುದ್ದೇಶಕ್ಕೆ ಬಳಸಿರುವುದರಿಂದ ಸಕಾಲಕ್ಕೆ ಮರುಪಾವತಿ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಮತ್ತೊಬ್ಬ ಸದಸ್ಯೆ ಪುಷ್ಪಾ ಮಾತನಾಡಿ, ‘ಸಂಕಷ್ಟದಲ್ಲಿದ್ದ ನಮಗೆ ಡಿಸಿಸಿ ಬ್ಯಾಂಕ್ ದೇವರ ರೂಪದಲ್ಲಿ ನೆರವು ನೀಡಿದೆ. ಬ್ಯಾಂಕ್‌ನ ನಂಬಿಕೆ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಮೊದಲು ಪಡೆದ ಸಾಲ ಮರುಪಾವತಿಸಿ ಮತ್ತೆ ಸಾಲ ಪಡೆದಿದ್ದೇನೆ. ಶೂನ್ಯ ಬಡ್ಡಿ ಸಾಲದ ಪ್ರಮಾಣ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಅರಿವು ಮೂಡಿಸಿ: ‘ಡಿಸಿಸಿ ಬ್ಯಾಂಕ್ ಅಭಿವೃದ್ಧಿಯಾಗಲು ಸ್ತ್ರೀಶಕ್ತಿ ಸಂಘಗಳ ಪಾತ್ರ ಮುಖ್ಯವಾದದ್ದು. ನೆರೆಹೊರೆಯವರಿಗೆ ಬ್ಯಾಂಕ್‌ನ ಬಗ್ಗೆ ಅರಿವು ಮೂಡಿಸಿ ಸಂಘದ ಸದಸ್ಯರಾಗುವಂತೆ ತಿಳಿಸಿ’ ಎಂದು ಸೂರ್ಯಕುಮಾರ್‌ ಸಲಹೆ ನೀಡಿದರು.

‘ಡಿಸಿಸಿ ಬ್ಯಾಂಕ್ ಹಾಗೂ ನಬಾರ್ಡ್‌ ಬ್ಯಾಂಕ್‌ನ ಅಭಿವೃದ್ಧಿಗೆ ಸ್ವಸಹಾಯ ಸಂಘಗಳ ಹೆಚ್ಚಿನ ಸಂಖ್ಯೆಯಲ್ಲಿ ರಚನೆಯಾಗಬೇಕು. ಜತೆಗೆ ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಸಂಘಗಳ ಆರ್ಥಿಕ ಶಕ್ತಿಯೂ ವೃದ್ಧಿಸುತ್ತದೆ’ ಎಂದು ಕಿವಿಮಾತು ಹೇಳಿದರು.

‘ಡಿಸಿಸಿ ಬ್ಯಾಂಕ್‌ ಮಹಿಳೆಯರ ಸಬಲೀಕರಣಕ್ಕೆ ಸಾಲ ನೀಡುತ್ತಿದೆ. ಸಾಲದ ಹಣ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸಂಘಗಳನ್ನು ಹೆಚ್ಚಿಸಲು ಹಾಗೂ ಸಂಘ ನಿರ್ವಹಣೆ ಮಾಡುವ ಕುರಿತು ತರಬೇತಿ ನೀಡುತ್ತೇವೆ. ಸಂಘಗಳು ಸಾಲ ಪಡೆಯುವುದಕ್ಕಷ್ಟೇ ಸೀಮಿತವಾಗಬಾರದು. ಲಾಭ ಹೆಚ್ಚಳದ ಮಾರ್ಗ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.