ADVERTISEMENT

ಕೋಲಾರ: ಸರ್ಕಾರಿ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:54 IST
Last Updated 14 ಜನವರಿ 2026, 7:54 IST
ಶ್ರೀನಿವಾಸಪುರ ಪಟ್ಟಣದ ಬಾಲಕಿಯರ ಸರ್ಕಾರಿ ಉರ್ದು ಇಂಗ್ಲಿಷ್ ಮಾಧ್ಯಮ ಶಾಲಾ ಆವರಣದಲ್ಲಿ ಕಲಿಕಾ ಹಬ್ಬ ನಡೆಯಿತು
ಶ್ರೀನಿವಾಸಪುರ ಪಟ್ಟಣದ ಬಾಲಕಿಯರ ಸರ್ಕಾರಿ ಉರ್ದು ಇಂಗ್ಲಿಷ್ ಮಾಧ್ಯಮ ಶಾಲಾ ಆವರಣದಲ್ಲಿ ಕಲಿಕಾ ಹಬ್ಬ ನಡೆಯಿತು   

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಉರ್ದು ಇಂಗ್ಲಿಷ್ ಮಾಧ್ಯಮ ಶಾಲಾ ಆವರಣದಲ್ಲಿ ಉರ್ದು ಸಿಆರ್‌ಸಿ ಜಾಕೀರ್ ಹುಸೇನ್ ಮೊಹಲ್ಲಾದಿಂದ ಕಲಿಕಾ ಹಬ್ಬ (ಎಫ್‌ಎಲ್‌ಎನ್) ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಆರ್‌ಸಿ ಸಂಯೋಜಕ ವಸಂತ್, ‘ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದರು.

ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ. ಶಿಕ್ಷಕರ ನವೀನ ಹಾಗೂ ಸೃಜನಶೀಲ ಬೋಧನಾ ವಿಧಾನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿವೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಲಿಕಾ ಮಾದರಿಗಳು, ಚಾರ್ಟ್‌ಗಳು, ಭಾಷಾ ಮತ್ತು ಗಣಿತ ಆಧಾರಿತ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅಕ್ಷರ ಗುರುತು, ಪದರಚನೆ, ಓದು ಅಭ್ಯಾಸ, ಸಂಖ್ಯೆ ಪರಿಚಯ ಹಾಗೂ ಸರಳ ಗಣಿತ ಕ್ರಿಯೆಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ಗಮನ ಸೆಳೆಯಿತು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಉರ್ದು ಸಿಆರ್‌ಸಿ ನಜೀಮಾ ಬೇಗಂ ಮಾತನಾಡಿ, ‘ಎಫ್‌ಎಲ್‌ಎನ್ ಕಾರ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಗವಾಗಿದ್ದು, ಮೂರನೇ ತರಗತಿ ಪೂರ್ಣಗೊಳಿಸುವ ವೇಳೆಗೆ ಮಕ್ಕಳು ಓದು, ಬರವಣಿಗೆ ಮತ್ತು ಗಣಿತದಲ್ಲಿ ದೃಢ ನೆಲೆ ಸಾಧಿಸಬೇಕು ಎಂಬ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು, ಪಾಲಕರು ಮತ್ತು ಸಮುದಾಯ ಒಟ್ಟಾಗಿ ಬೆಂಬಲ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಸಿ ಓ ಲಕ್ಷ್ಮಿನಾರಾಯಣ, ಜಿ.ಎನ್.ಕೊಡಂದಪ್ಪ, ವೆಂಕಟರವಣ್ಣ, ಬಿಆರ್‌ಪಿ ವೆಂಕಟ ಚಲಪತಿ, ಮಧು ಕುಮಾರ್, ಮುಖ್ಯಶಿಕ್ಷಕ ಮೊಹಮ್ಮದ್ ಸಾದಿಕ್, ಅಕ್ಮಲ್ ಖಾನ್, ಶಕೀಲಾ ಬಾನು, ಯಾಸ್ಮಿನ್ ತಾಜ್ ಸೇರಿದಂತೆ ಶಿಕ್ಷಕರು ರೂಹಿ ನಾಜ್, ನಸ್ರುಲ್ಲಾ ಖಾನ್, ಶಿವ ರೆಡ್ಡಿ, ಸುಮಿತ್ರಮ್ಮ, ಸಲ್ಮಾ ಬಾನು ಇದ್ದರು.

ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಶಿಕ್ಷಕ ವೃಂದದ ಸಹಕಾರ ಮಹತ್ವದ್ದಾಗಿದೆ ಎಂದು ಸಂಘಟಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.