ADVERTISEMENT

ಕೋಲಾರ: ರಾಸುಗಳ ಆರೋಗ್ಯಕ್ಕೆ ಒತ್ತು ಕೊಡಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 15:17 IST
Last Updated 12 ಸೆಪ್ಟೆಂಬರ್ 2021, 15:17 IST
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ರಾಸುಗಳಿಗೆ ಕಂದು ರೋಗ ತಡೆ ಲಸಿಕೆ ಹಾಕಲಾಯಿತು
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ರಾಸುಗಳಿಗೆ ಕಂದು ರೋಗ ತಡೆ ಲಸಿಕೆ ಹಾಕಲಾಯಿತು   

ಕೋಲಾರ: ‘ಗುಣಮಟ್ಟದ ಹಾಲು ಉತ್ಪಾದನೆಗೆ ಉತ್ತಮ ಆಹಾರದ ಜತೆಗೆ ರಾಸುಗಳ ಆರೋಗ್ಯ ರಕ್ಷಣೆಗೂ ಹೆಚ್ಚಿನ ಒತ್ತು ಕೊಡಬೇಕು’ ಎಂದು ಪಶು ವೈದ್ಯ ಡಾ.ಎಸ್.ವಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಚಿಟ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಂದು ರೋಗ ಲಸಿಕೆ ಶಿಬಿರದಲ್ಲಿ ಮಾತನಾಡಿದರು.

‘ಹೈನೋದ್ಯಮ ಕೋಲಾರ ಜಿಲ್ಲೆಯ ಜೀವನಾಡಿ. ಇಲ್ಲಿನ ರೈತರು ಹಸುಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದಾರೆ. ಸಂಕಷ್ಟದಲ್ಲೂ ಆರ್ಥಿಕವಾಗಿ ಶಕ್ತಿ ತುಂಬಿ ರೈತರ ಕೈಹಿಡಿದಿರುವ ಹೈನುಗಾರಿಕೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ’ ಎಂದು ತಿಳಿಸಿದರು.

ADVERTISEMENT

‘ರಾಸುಗಳಿಗೆ ಗುಣಮಟ್ಟದ ಮೇವು, ಪಶು ಆಹಾರ ಕೊಡಬೇಕು. ಜತೆಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಕಾಯಿಲೆ ಬಂದ ನಂತರ ತೊಂದರೆ ಅನುಭವಿಸುವ ಬದಲಿಗೆ ಮೊದಲೇ ಲಸಿಕೆ ಹಾಕಿಸುವುದು ಒಳ್ಳೆಯದು. ಗುಣಮಟ್ಟದ ಹಾಲು ಉತ್ಪಾದಿಸಿದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಹೇಳಿದರು.

ಹಸುಗಳ ಸಾಕಣೆ, ಆರೋಗ್ಯ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಹಾಲು ಕರೆಯುವ ಮುನ್ನ ವಹಿಸಬೇಕಾದ ಮುನ್ನಚ್ಚರಿಕೆ, ಸ್ವಚ್ಛತೆ ಕಾಪಾಡುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. 40ಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಯಿತು.

ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಮಹಮ್ಮದ್‌, ನಾಗರಾಜ್, ಚಿಟ್ನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ಎಂ.ಶ್ರೀನಿವಾಸಗೌಡ, ಕಾರ್ಯದರ್ಶಿ ಸಿ.ಎಂ.ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.