ADVERTISEMENT

ಕಾಯ್ದೆ ತಿದ್ದುಪಡಿ ವಿರೋಧಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 4:31 IST
Last Updated 17 ಸೆಪ್ಟೆಂಬರ್ 2020, 4:31 IST
ಶ್ರೀನಿವಾಸಪುರದಲ್ಲಿ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು
ಶ್ರೀನಿವಾಸಪುರದಲ್ಲಿ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು   

ಶ್ರೀನಿವಾಸಪುರ: ಶಾಸಕರು ವಿಧಾನ ಸಭಾ ಅಧಿವೇಶನದಲ್ಲಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಬೆಂಬಲಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಕಚೇರಿ ಮುಂದೆ ಧರಣಿ ನಡೆಸಿದರು.

ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್‌ ಕುಮಾರ್ ಮಾತನಾಡಿ, ‘ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ. ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿದೆ. ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಸರ್ಕಾರದ ಕ್ರಮ ಅಸಂಘಟಿತ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಿದೆ’ ಎಂದು ಆರೋಪಿಸಿದರು.

ಜನ ಸಮ್ಮತವಲ್ಲದ ಸುಧಾರಣೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ. ಶಾಸಕರು ಸರ್ಕಾರದ ಜನ ವಿರೋಧಿ ನಿಲುವನ್ನು ಬೆಂಬಲಿಸಬಾರದು. ಅಧಿವೇಶನದಲ್ಲಿ ಸರ್ಕಾರದ ಪ್ರಮುಖ ತಿದ್ದುಪಡಿ ಮಸೂದೆಗಳು ಬಿದ್ದುಹೋಗಲು ಎಲ್ಲ ಶಾಸಕರು ಪಕ್ಷ ಭೇದ ಮರೆತು ಒಗ್ಗೂಡಬೇಕು ಎಂದು ಹೇಳಿದರು.

ADVERTISEMENT

ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ಬಡವರ ಪರ ಕಾಳಜಿ ಇದೆ. ಸರ್ಕಾರದ ಜನ ವಿರೋಧಿ ನಿಲುವುಗಳನ್ನು ವಿರೋಧಿಸಬೇಕು. ಜನಪರವಲ್ಲದ ಯಾವುದೇ ಕಾಯ್ದೆ ಜನರ ಮೇಲೆ ಹೇರಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಮುಖಂಡರಾದ ಎನ್‌.ವೀರಪ್ಪರೆಡ್ಡಿ, ಎಸ್‌.ಎಂ.ನಾಗರಾಜ್‌ ಆರ್‌.ವೆಂಕಟೇಶ್‌, ನಂಜಪ್ಪ, ಭಾಸ್ಕರ್‌ ರೆಡ್ಡಿ, ಮಂಜುಳಾ, ನಾಗಭೂಷಣ್‌, ರಾಮಪ್ಪ, ಶಿವಶಂಕರ್‌, ವೇಣುಗೋಪಾಲ್‌, ಸೈಯದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.